ಮೂವರು ಮೋದಿಗಳಿಂದ ದೇಶ ಲೂಟಿ: ಯೆಚೂರಿ

Update: 2018-04-23 14:42 GMT

ಹೊಸದಿಲ್ಲಿ, ಎ.23: ಪ್ರಧಾನಿ ನರೇಂದ್ರ ಮೋದಿ, ತಲೆ ತಪ್ಪಿಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಹಾಗೂ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಇವರಲ್ಲಿ ಇರುವ ಸಾಮ್ಯತೆಯೆಂದರೆ ಇವರೆಲ್ಲರೂ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

ಈ ದೇಶದಲ್ಲಿ ಇಷ್ಟೊಂದು ಮಂದಿ ಮೋದಿಗಳು ಇದ್ದಾರೆ ಎಂಬುದು ಜನರಿಗೆ ತಿಳಿದಿರಲಿಲ್ಲ. ಆದರೆ ಮೂವರು ಮೋದಿಗಳೂ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ . 2014ರ ಮೇ ತಿಂಗಳಿನಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಲೂಟಿ ಪ್ರಕ್ರಿಯೆ ಅಧಿಕವಾಗಿದೆ ಎಂದು ಯೆಚೂರಿ ಟೀಕಿಸಿದರು. ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿ, ಬೃಹತ್ ಹೂಡಿಕೆದಾರರು ಹಾಗೂ ಉದ್ಯಮಿಗಳ ಸುಮಾರು 3ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಜನತೆ ಬ್ಯಾಂಕ್‌ನಲ್ಲಿ ಇರಿಸಿದ್ದ ಹಣವನ್ನು ಲೂಟಿ ಮಾಡಿದವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಆದರೆ ಅವರನ್ನು ದೇಶಕ್ಕೆ ಮರಳಿ ಕರೆತರಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಯೆಚೂರಿ ಟೀಕಿಸಿದ್ದಾರೆ. ರವಿವಾರ, ಸಿಪಿಎಂನ ಐದು ದಿನಗಳಾವಧಿಯ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಯೆಚೂರಿ ಮಾತನಾಡಿದರು.

 ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಹಾಭಾರತದ ದುರ್ಯೋಧನ ಹಾಗೂ ದುಶ್ಯಾಸನರಿದ್ದಂತೆ ಎಂದ ಯೆಚೂರಿ, ಮಹಾಭಾರತದಲ್ಲಿ 100 ಮಂದಿ ಕೌರವ ಸಹೋದರರ ಬಗ್ಗೆ ಉಲ್ಲೇಖವಿದೆ. ಆದರೆ ಬಹುತೇಕ ಜನರಿಗೆ ದುರ್ಯೋಧನ ಮತ್ತು ದುಶ್ಯಾಸನರ ಪರಿಚಯ ಮಾತ್ರವಿದೆ. ಇದೇ ರೀತಿ ಬಿಜೆಪಿಯಲ್ಲಿ ಕೇವಲ ಮೋದಿ ಮತ್ತು ಶಾರ ಬಗ್ಗೆ ಜನರಿಗೆ ತಿಳಿದಿದೆ ಎಂದು ಲೇವಡಿ ಮಾಡಿದರು.

ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ದುಷ್ಕೃತ್ಯದಲ್ಲಿ ಶಾಮೀಲಾದವರು ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರಾದ ಕಾರಣ ಇವರ ವಿರುದ್ಧ ಕ್ರಮ ಕೈಗೊಳ್ಳದೆ ಸಂತ್ರಸ್ತರನ್ನೇ ಗುರಿ ಮಾಡಲಾಗಿದೆ. ಇದುವರೆಗೂ ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಈ ರೀತಿಯ ದುಸ್ಥಿತಿ ಬಂದಿಲ್ಲ ಎಂದರು. ತೆಲಂಗಾಣ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಸ್ತಾವಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ವಿರೋಧಿ ತೃತೀಯ ರಂಗದ ಬಗ್ಗೆ ಪ್ರತಿಕ್ರಿಯಿಸಿದ ಯೆಚೂರಿ, ಈ ಕುರಿತು ವಿಮರ್ಶೆ ನಡೆಸಿದ ಬಳಿಕ ಸಿಪಿಎಂ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಟಿಆರ್‌ಎಸ್ ಮುಖ್ಯಸ್ಥರು ಈ ಕೆಲ ದಿನಗಳ ಹಿಂದೆ ಈ ಪ್ರಸ್ತಾವನೆಯನ್ನು ಮುಂದಿರಿಸಿದ್ದರು. ಆದರೆ ಕೇವಲ ಅಧಿಕಾರ ಪಡೆಯಲು ಮಾತ್ರ ತೃತೀಯ ರಂಗ ಸ್ಥಾಪಿಸುವುದರಲ್ಲಿ ಅರ್ಥವಿಲ್ಲ ಎಂದು ಸೀತಾರಾಮ್ ಯೆಚೂರಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News