ತರೀಕೆರೆ ಕ್ಷೇತ್ರ: ಬಿಜೆಪಿ ಅಭ್ಯರ್ಥಿಯಾಗಿ ಡಿ.ಎಸ್.ಸುರೇಶ್, ಪಕ್ಷೇತರ ಅಭ್ಯರ್ಥಿಯಾಗಿ ಶ್ರೀನಿವಾಸ್ ನಾಮಪತ್ರ ಸಲ್ಲಿಕೆ

Update: 2018-04-23 14:46 GMT
ಡಿ.ಎಸ್.ಸುರೇಶ್, ಶ್ರೀನಿವಾಸ್

ಚಿಕ್ಕಮಗಳೂರು, ಎ.23: ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಮುನಿಸಿಕೊಂಡು ಬಂಡಾಯವೆದ್ದಿದ್ದ ತರೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಸೋಮವಾರ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪಟ್ಟಣದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಕೈಟಿಕೆಟ್ ತಪ್ಪಿದ್ದಕ್ಕೆ ಬಂಡಾಯದ ಅಲೆ ಎಬ್ಬಿಸಿದ್ದ ಶ್ರೀನಿವಾಸ್ ಬಳಿಕ ನಡೆದ ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ವರಿಷ್ಠರ ಮನೆ ಬಾಗಿಲು ತಟ್ಟಿ ಟಿಕೆಟ್‍ಗಾಗಿ ಮನವಿಮಾಡಿದ್ದರು. ಟಿಕೆಟ್ ಸಿಗುವ ಭರವಸೆಯಲ್ಲಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಶ್ರೀನಿವಾಸ್ ಜೆಡಿಎಸ್ ಸೇರುತ್ತಿದ್ದಂತೆ ತರೀಕೆರೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಶಂಕರಪ್ಪ ವರಿಷ್ಠರ ವಿರುದ್ಧ ಸಿಡಿದೆದ್ದಿದ್ದರು. ಕಾರ್ಯಕರ್ತರು ಸಮಾಧಾನಗೊಂಡಿದ್ದರು. ಇದರಿಂದ ಪಕ್ಷಕ್ಕೆ ಮುಂದಾಗುವ ನಷ್ಟವನ್ನು ಶೀಘ್ರ ಅರಿತ ಜೆಡಿಎಸ್ ವರಿಷ್ಠರು ಶಿವಶಂಕರಪ್ಪ ಅವರಿಗೇ ಟಿಕೆಟ್ ನೀಡಿದ್ದರು. ಇದರಿಂದ ತರೀಕೆರೆ ಶಾಸಕ ಶ್ರೀನಿವಾಸ್ ಅಂತಂತ್ರ ಸ್ಥಿತಿಯಲ್ಲಿದ್ದರು. ಆದರೆ ಬೆಂಬಲಿಗರ ಒತ್ತಡದಿಂದ ಪಕ್ಷೇತರವಾಗಿ ಕಣಕ್ಕಿಳಿಯುವ ನಿಟ್ಟಿನಲ್ಲಿ ರವಿವಾರ ತರೀಕೆರೆ ಪಟ್ಟಣದಲ್ಲಿ ಸಾರ್ವಜನಿಕರಿಂದ ಠೇವಣಿ ಹಣ ಸಂಗ್ರಹಿಸಿದ ಅವರು ಸೋಮವಾರ ತಮ್ಮ ಪತ್ನಿ ಹಾಗೂ ಬೆಂಬಲಿಗರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನು ತರೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ, ಯಡಿಯೂರಪ್ಪ ಅವರ ಕಟ್ಟಾ ಅನುಯಾಯಿ ಡಿ.ಎಸ್.ಸುರೇಶ್ ಸೋಮವಾರ ತಮ್ಮ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯ ಶಕ್ತಿ ಪ್ರದರ್ಶನದೊಂದಿಗೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಬಾರಿ ಸುರೇಶ್ ಕೆಜೆಪಿಯಿಂದ ಕಣಕ್ಕಿಳಿದು ಸೋಲನ್ನನುಭವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News