ಮೈಸೂರು: ಸಚಿವ ಮಹದೇವಪ್ಪ, ತನ್ವೀರ್ ಸೇಠ್ ಸೇರಿ ಹಲವರಿಂದ ನಾಮಪತ್ರ ಸಲ್ಲಿಕೆ

Update: 2018-04-23 15:32 GMT

ಮೈಸೂರು,ಎ.23: ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಕೆ ಚುರುಕುಗೊಂಡಿದ್ದು, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಹಲವರು ಇಂದು ನಾಮ ಪತ್ರ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ತಿ.ನರಸೀಪುರ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ಸಚಿವ ತನ್ವೀರ್ ಸೇಠ್ ನರಸಿಂಹರಾಜ ಕ್ಷೇತ್ರದಲ್ಲಿ ಐದನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕೃಷ್ಣರಾಜ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಕೆ. ಸೋಮಶೇಖರ್ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಆರ್.ಕ್ಷೇತ್ರ ಸತತ ಐದು ಬಾರಿಯೂ ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಸೋಮಶೇಖರ್ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ 

ತಮ್ಮ ಅಪಾರ ಅಭಿಮಾನಿಗಳೊಂದಿಗೆ ಸಚಿವ ತನ್ವೀರ್ ಸೇಠ್ ಎಫ್.ಟಿ.ಎಸ್ ವೃತ್ತದಿಂದ ಮೆರವಣಿಗೆಯಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ತನ್ವೀರ್ ಸೇಠ್, ಇದು ನನಗೆ ಐದನೇ ಚುನಾವಣೆ. ಈ ಬಾರಿಯೂ ಅತ್ಯಧಿಕ ಅಂತರದಿಂದ ನಾನು ವಿಜಯಿಯಾಗುತ್ತೇನೆ. ಕ್ಷೇತ್ರದ ಮತದಾರರು ನನ್ನ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದಾರೆ. ಹಲವಾರು ಅಭಿವೃದ್ಧಿಯನ್ನು ಮಾಡಿದ್ದೇನೆ. ತೀರಾ ಹಿಂದುಳಿದಿರುವ ಕ್ಷೇತ್ರ ನನ್ನದು. ಈಗಾಗಲೇ ಸಾಕಷ್ಟು ಅನುಧಾನವನ್ನು ತಂದು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದೇನೆ. ಕ್ಷೇತ್ರದ ಮತದಾರರು ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತನ್ವೀರ್, ಅಬ್ದುಲ್ ಮಜೀದ್ ಭೇಟಿ: ಸಚಿವ ತನ್ವೀರ್ ಸೇಠ್ ತಮ್ಮ ಉಮೇದುವಾರಿಕೆ ಸಲ್ಲಿಸಿ ಹೊರಬರುತ್ತಿದ್ದಂತೆ ಎಸ್.ಡಿ.ಪಿ.ಐ ಅಭ್ಯರ್ಥಿ ಅಬ್ದುಲ್ ಮಜೀದ್ ಕೆಲಸದ ನಿಮಿತ್ತ ಆಗಮಿಸಿದರು. ಪರಸ್ಪರ ಭೇಟಿಯಾದ ಎದುರಾಳಿಗಳು, ಚುನಾವಣೆಯನ್ನು ಮರೆತು ಒಬ್ಬರಿಗೊಬ್ಬರು ತಬ್ಬಿಕೊಂಡು ಕೆಲ ನಿಮಿಷ ಮಾತನಾಡಿ ತಮ್ಮ ಸ್ನೇಹಪರತೆ ಮೆರೆದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News