ಸಂಗೀತಕಾರರು, ಸಾಹಿತಿಗಳಿಗೆ 13 ಕೋ.ರೂ.ರಾಯಧನ ವಿತರಣೆ

Update: 2018-04-23 15:37 GMT

ಮುಂಬೈ,ಎ.23: ಇಂಡಿಯನ್ ಪರ್ಫಾಮಿಂಗ್ ರೈಟ್ಸ್ ಸೊಸೈಟಿ (ಐಪಿಆರ್‌ಎಸ್)ಯ ಅಧ್ಯಕ್ಷರಾಗಿರುವ ಹಿರಿಯ ಚಿತ್ರಸಾಹಿತಿ ಮತ್ತು ಕವಿ ಜಾವೇದ್ ಅಖ್ತರ್ ಅವರು ಮ್ಯೂಸಿಕ್ ಕಂಪನಿಗಳು ನೀಡಿರುವ ರಾಯಧನದ ಭಾಗವಾಗಿ 13 ಕೋ.ರೂ.ಗಳನ್ನು ಸಂಘದ ಸದಸ್ಯರಿಗೆ ವಿತರಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದರು.

48 ವರ್ಷಗಳ ಹಿಂದೆ ಸ್ಥಾಪನೆಯಾದ ಐಪಿಆರ್‌ಎಸ್ ಕೃತಿಸ್ವಾಮ್ಯ ರಾಯಧನ ಸಂಗ್ರಹ ಸಂಸ್ಥೆಯಾಗಿದ್ದು,ಭಾರತದಲ್ಲಿ ಸಂಗೀತ ಮತ್ತು ಸಂಬಂಧಿತ ಸಾಹಿತ್ಯಗಳಿಗಾಗಿ ಅಧಿಕೃತವಾಗಿ ನೋಂದಣಿಯಾಗಿರುವ ಕಾಪಿರೈಟ್ ಸೊಸೈಟಿಯಾಗಿದೆ.

ಸೋನಿ ಮ್ಯೂಸಿಕ್,ಟಿಪ್ಸ್,ಯೂನಿವರ್ಸಲ್ ಮ್ಯೂಸಿಕ್,ವೀನಸ್ ಮತ್ತು ಆದಿತ್ಯ ಮ್ಯೂಸಿಕ್‌ನಂತಹ ಮ್ಯೂಸಿಕ್ ಕಂಪನಿಗಳ ಪರವಾಗಿ ಕಳೆದ ಆರು ವರ್ಷಗಳ ಅವಧಿಗೆ ಫೋನೊಗ್ರಾಫಿಕ್ ಪರ್ಫಾಮನ್ಸ್ ಲಿ.ನೀಡಿರುವ ರಾಯಧನ ಸಂಘದ 2,800 ಸದಸ್ಯರಿಗೆ ವಿತರಣೆಯಾಗಲಿದೆ. 10ಕ್ಕಿಂತ ಕಡಿಮೆ ಗೀತೆಗಳನ್ನು ಹೊಂದಿರುವ ಸದಸ್ಯರಿಗೆ ತಲಾ 10,000 ರೂ. ಮತ್ತು 10ಕ್ಕಿಂತ ಹೆಚ್ಚು ಗೀತೆಗಳನ್ನು ಹೊಂದಿದವರಿಗೆ ತಲಾ 53,000ರೂ.ಗಳಂತೆ ಹಂಚಲಾಗುವುದು.

ಕಂಪನಿಗಳು ರಾಯಧನವನ್ನು ಪಾವತಿಸಿರುವುದು ಸಂತಸದ ವಿಷಯವಾಗಿದೆ. ಈವರೆಗೆ ಆಗಿರುವುದೇನೋ ಒಳ್ಳೆಯದೇ,ಆದರೆ ನಾವಿನ್ನೂ ಬಹುದೂರ ಸಾಗಬೇಕಿದೆ. ನಮ್ಮೆಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದೇವೆ ಎಂದ ಆಖ್ತರ್,ಹಲವಾರು ಕಂಪನಿಗಳು ರಾಯಧನವನ್ನು ಪಾವತಿಸಿವೆಯಾದರೂ ಟಿ-ಸಿರೀಸ್ ಮತ್ತು ಯಶ್‌ರಾಜ್ ಫಿಲ್ಮ್ಸ್ ಇದಕ್ಕೆ ಕೈಜೋಡಿಸಿಲ್ಲ. ನಾನು ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಮತ್ತು ರಾಯಧನ ಪಾವತಿಗೆ ಅವರನ್ನು ಒಪ್ಪಿಸುವ ವಿಶ್ವಾಸವಿದೆ ಎಂದರು.

73ರ ಹರೆಯದ ಅಖ್ತರ್ ಚಿತ್ರಸಾಹಿತಿಗಳು ಮತ್ತು ಸಂಗೀತಕಾರರಿಗೆ ರಾಯಧನವನ್ನು ದೊರಕಿಸಲು ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News