ಬಿಎಸ್ ವೈ ವಿರುದ್ಧ ಗಣವೇಷದಲ್ಲಿ ಸ್ಪರ್ಧೆಗಿಳಿದ ಆರೆಸೆಸ್ಸ್ ಮಾಜಿ ಮುಖಂಡ ಹನುಮೇಗೌಡ

Update: 2018-04-23 16:49 GMT

ಶಿವಮೊಗ್ಗ,ಎ.23: ಪ್ರಾಮಾಣಿಕತೆಯಿಂದ ದುಡಿದು ಪಕ್ಷ ಕಟ್ಟಿದ ಲಕ್ಷಾಂತರ ಸ್ವಯಂ ಸೇವಕರನ್ನು ತುಳಿದು, ಪಕ್ಷಾಂತರಿಗಳನ್ನು ತುಂಬಿ ಪ್ರಾಮಾಣಿಕರನ್ನು ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ. ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಆರೆಸೆಸ್ಸ್ ಮಾಜಿ ಮುಖಂಡ ಹನುಮೇಗೌಡ ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಅವರು, ತುಳಿತಕ್ಕೊಳಗಾದವರನ್ನು, ಪ್ರಾಮಾಣಿಕರನ್ನು ಸಂಘದ ಹಿರಿಯರು ಬೆಂಬಲಿಸಬೇಕಾಗಿತ್ತು. ಆದರೆ ಸಂಘದ ಹಿರಿಯರು ಅಸಹಾಯಕರಾಗಿ ಭ್ರಷ್ಟರು, ಪಕ್ಷಾಂತರಿಗಳಿಗೆ ಬೆಂಬಲಿಸುತ್ತಿರುವುದು ದುಖಃದ ಸಂಗತಿಯಾಗಿದೆ ಎಂ ಅವರು, ಕಳಂಕಿತರ ವಿರುದ್ಧ ಪ್ರಾಮಾಣಿಕರು ಸ್ಪರ್ಧೆ ಮಾಡಬೇಕೆಂಬ ಸಂದೇಶ ನೀಡುವ ಕೆಲಸ ಕೂಡಾ ಆಗಬೇಕಾಗಿದೆ ಎಂದರು.

ದೇಶಭಕ್ತಿ, ನಿಸ್ವಾರ್ಥ, ತ್ಯಾಗ ಸೇವೆ ಶಿಸ್ತಿಗೆ ಹೆಸರಾದ ಸ್ವಯಂ ಸೇವಕರೆಂಬ ಸಂಸ್ಕಾರದ ಮುಖವಾಡ ಹಾಕಿದ ಬಿಜೆಪಿಯು ಕಳಂಕಿತರಿಂದ ತುಂಬಿರುವುದು ಮಾತ್ರವಲ್ಲದೆ ಬಿಜೆಪಿ ನಾಯಕರು ಇಂದು ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗಿ ಅನೇಕರು ಜೈಲಿಗೆ ಹೋಗಿ ಬಂದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಕಳಂಕಿತರಾದ ರಾಜ್ಯಾಧ್ಯಕ್ಷರು ಇಂದು ಗಣಿ ಲೂಟಿಯ ಆರೋಪಿಗಳ ಜೊತೆ ವೇದಿಕೆ ಹಂಚಿಕೊಂಡು ರಾಷ್ಟ್ರೀಯ ಅಧ್ಯಕ್ಷರ ಮಾತಿಗೂ ಬೆಲೆ ಕೊಡದೆ ಬೇಜವಾಬ್ದಾರಿಯಿಂದ ವರ್ತಿಸಿ, ಪಕ್ಷ ಕಟ್ಟಿದ ಪ್ರಾಮಾಣಿಕರು ಸಮಾಜದ ನಡುವೆ ತಲೆ ಎತ್ತಿ ನಡೆದಾಡದಂತೆ ಮಾಡುತ್ತಿರುವುದು ಸಂಘಕ್ಕೆ ಮಾಡಿದ ಅಪಮಾನವಾಗಿದೆ ಎಂದರು.

ಇಂತಹ ಹತ್ತಾರು ವಿಚಾರಗಳ ಹಿನ್ನೆಲೆಯಲ್ಲಿ ಕಳಂಕಿತರ ವಿರುದ್ದ ಪ್ರಾಮಾಣಿಕ ಸಂಘದ ಸ್ವಯಂಸೇವಕನಾದ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿರುತ್ತೇನೆ ಎಂದು ಹೇಳಿದರು.

ಈ ವೇಳೆ ಮಾಜಿ ಸೈನಿಕ ಪಿ.ವೈ ರವಿ( ಕಪ್ಪನಹಳ್ಳಿ), ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷರಾದ ಜಯಲಿಂಗಪ್ಪ, ರೈತ ಸಂಘದ ಅಧ್ಯಕ್ಷರಾದ ಡಿ.ಎಸ್ ಈಶ್ವರಪ್ಪ, ರೈತ ಮುಖಂಡ ಪಾಲಾಕ್ಷಪ್ಪ ಮದಗಾರನಹಳ್ಳಿ ಅನೇಕ ಬೆಂಬಲಿಗರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News