ಮೈಸೂರು: ನಾಯಕರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದ ಬಿಜೆಪಿ ಕಾರ್ಯಕರ್ತರು

Update: 2018-04-23 17:12 GMT

ಮೈಸೂರು,ಎ.23: ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವುದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು  ನಾಯಕರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡಿನ ಬಿಜೆಪಿ ಸಮಾವೇಶದಲ್ಲಿ ನಡೆದ ಗಲಾಟೆಯಿಂದ ತಪ್ಪಿಸಿಕೊಂಡು ಮೈಸೂರಿಗೆ ಆಗಮಿಸಿದ ಯಡಿಯೂರಪ್ಪ, ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಉಳಿದಿರುವ ಮಾಹಿತಿ ಅರಿತು, ಬಿಜೆಪಿ ಕಾರ್ಯಕರ್ತರು ಹೋಟೆಲ್‍ಗೆ ಮುತ್ತಿಗೆ ಹಾಕಿ ಯಡಿಯೂರಪ್ಪ ಅವರು ಹೊರ ಬರದಂತೆ ದಿಗ್ಭಂಧನ ವಿಧಿಸಿದರು.

ಕೇಂದ್ರ ಸಚಿವರಾದ ಅನಂತಕುಮಾರ್, ಅನಂತ್ ಕುಮಾರ್ ಹೆಗಡೆ, ಸಂಸದ ಪ್ರತಾಪ್ ಸಿಂಹ, ಆರ್.ಅಶೋಕ್ ಅವರ ಭಾವಚಿತ್ರಗಳಿಗೆ ಉಗಿದು ಚಪ್ಪಲಿಯಲ್ಲಿ ಹೊಡೆದು ಕಾಲಿನಲ್ಲಿ ಹೊಸಕಿ ಹಾಕಿದರು. ಬಿಜೆಪಿ ಹಾಗೂ ಕೇಸರಿ ದ್ವಜಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ವಿಜಯೇಂದ್ರ ಅವರಿಗೇ ವರುಣಾದಿಂದ ಸ್ಪರ್ಧೆಗೆ ಅವಕಾಶ ನೀಡಬೇಕು. ಬಿಜೆಪಿ ಹೈಕಮಾಂಡ್ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕರ್ನಾಟಕದಲ್ಲಿ ಬಿಜೆಪಿ ಸೋಲುತ್ತದೆ. ಬಿಜೆಪಿ ನಾಯಕರ್ಯಾರು ಮತ ಕೇಳಲು ಬರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ರಾಮದಾಸ್‍ಗೆ ಘೇರಾವ್: ಮಾಜಿ ಸಚಿವ ರಾಮದಾಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋಟೆಲ್‍ಗೆ ಬರುತಿದ್ದಂತೆ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು, ಅವರನ್ನು ಮುತ್ತಿಗೆ ಹಾಕಿದರು. ರಾಮದಾಸ್ ಹೋಟೆಲ್ ಒಳಗೆ ಹೋಗದಂತೆ ಹಿಡಿದು ಎಳೆದಾಡಿದರು. ಒಂದು ಹಂತದಲ್ಲಿ ಅವರು ನಿತ್ರಾಣಗೊಂಡರು.

ನಂತರ ಮಾತನಾಡಿದ ಅವರು, ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ವಿಜಯೇಂದ್ರ ಅವರಿಗೆ ವರುಣಾದಿಂದ ಸ್ಪರ್ಧೆಮಾಡಲು ಬಿಜೆಪಿ ಟಿಕೆಟ್ ನೀಡಬೇಕು, ಯಾವ ಮಟ್ಟದ ಹೋರಾಟಕ್ಕೂ ನಾನು ಸಿದ್ದ, ದೆಹಲಿ ಮಟ್ಟದಲ್ಲಿ ಬೇಕಾದರು ಹೋರಾಟ ಮಾಡೋಣ, ಒಂದು ವೇಳೆ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಿಲ್ಲ ಎಂದರೆ ನಾನು ಸಹ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು.

ಲಘು ಲಾಠಿ ಪ್ರಹಾರ: ಹೋಟೆಲ್ ಮುಂದೆ ಮುತ್ತಿಗೆ ಹಾಕಿ ಪ್ರತಿಭಟಿಸುತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದ ಘಟನೆಯೂ ಸಹ ನಡೆಯಿತು.

ಸುಮಾರು ಎರಡು ಗಂಟೆಗಳ ವರೆಗೆ ಹೋಟೆಲ್ ಮುಂದೆಯೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಾರ್ಯಕರ್ತರ ನಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಅಲ್ಲಿಂತ ತೆರಳುವಂತೆ ಹಲವಾರು ಬಾರಿ ಮನವಿಯನ್ನು ಮಾಡಿದರು. ಆದರೆ ಪೊಲೀಸರ ಮಾತಿಕೆ ಕಿಂಚಿತ್ತು ಬೆಲೆಕೊಡದ ಬಿಜೆಪಿ ಕಾರ್ಯರ್ತರಿಗೆ ಲಾಠಿ ರುಚಿ ತೋರಿಸಿ ಚದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News