ತುಮಕೂರು: ಯುವಕನ ಕೊಲೆ ಪ್ರಕರಣ; ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ತಲಾ 50 ಸಾವಿರ ದಂಡ

Update: 2018-04-23 17:54 GMT

ತುಮಕೂರು,ಎ.23: ಹಣಕಾಸಿನ ವಿಚಾರವಾಗಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಮೂವರು ಆರೋಪಿಗಳಿಗೆ ತುಮಕೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತಲಾ 50 ಸಾವಿರ ರೂ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತುಮಕೂರು ನಗರದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 2016ರ ನವೆಂಬರ್ 07 ರಂದು ಸ್ನೇಹಿತರೊಂದಿಗೆ ಟೀ, ಮದ್ಯ ಕುಡಿದು ಮನೆಗೆ ತೆರಳುತಿದ್ದ ಟಿ.ಚಿರಾಗ್ ಎಂಬಾತನನ್ನು ಹಣಕಾಸಿನ ವಿಚಾರವಾಗಿ ಮಾತನಾಡುವುದಿದೆ ಎಂದು ರಸ್ತೆಯ ಪಕ್ಕಕ್ಕೆ ಕರೆದುಕೊಂಡು ಹೋದ ಆರೋಪಿ ಶ್ರೀನಿವಾಸ್ ಮತ್ತು ಇತರರು ಲಾಂಗ್‍ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಹಲ್ಲೆಯನ್ನು ತಡೆಯಲು ಹೋದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಂದ್ರ ಬಾದಾಮಿಕರ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಐಪಿಸಿ ಕಲಂ 302 ಆರೋಪಕ್ಕಾಗಿ ತಲಾ 25 ಸಾವಿರ ದಂಡ ಮತ್ತು ಜೀವಾವಧಿ ಶಿಕ್ಷೆ, ಐಪಿಸಿ ಕಲಂ 120ರ ಅಪರಾಧಕ್ಕಾಗಿ ತಲಾ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ದಂಡದ ಹಣದಲ್ಲಿ 1 ಲಕ್ಷ ರೂಗಳನ್ನು ಮೃತರ ತಂದೆ, ತಾಯಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News