ಗೌರಿ ಹತ್ಯೆಯಾದ ನಂತರ ನಾನು ಪ್ರಶ್ನಿಸಲು ಪ್ರಾರಂಭಿಸಿದ್ದೇನೆ: ನಟ ಪ್ರಕಾಶ್ ರೈ

Update: 2018-04-23 18:03 GMT

ಸುಂಟಿಕೊಪ್ಪ,ಎ.23: ಕೋಮುವಾದದ ವಿರುದ್ಧ ಹೋರಾಟ ನಡೆಸಲು ಪ್ರಜ್ಞಾವಂತರು ಜಸ್ಟ್ ಆಸ್ಕಿಂಗ್ ಫೌಂಡೇಶನ್ ಜೊತೆ ಕೈಜೋಡಿಸಬೇಕೆಂದು ಬಹುಭಾಷಾ ನಟ ಪ್ರಕಾಶ್ ರೈ ಕರೆ ಮಾಡಿದರು. 

ಇಲ್ಲಿಗೆ ಸಮೀಪದ ರೆಸಾರ್ಟ್‍ನಲ್ಲಿ ಸೌಹಾರ್ದ ವೇದಿಕೆ ಸೋಮವಾರಪೇಟೆ ತಾಲೂಕು ಘಟಕ ಆಯೋಜಿಸಿದ್ದ ಸಂವಿಧಾನದ ಆಶಯಗಳು, ಪ್ರಸ್ತುತ ಸನ್ನಿವೇಶಗಳ ಸವಾಲುಗಳು ಸಂವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರ ತಮ್ಮ ಹಕ್ಕುಗಳನ್ನು ಪಡೆಯಲು ಜಸ್ಟ್ ಆಸ್ಕಿಂಗ್ ಸಂಸ್ಥೆ ಹುಟ್ಟು ಹಾಕಲಾಗಿದ್ದು, ಎಲ್ಲರೂ ಸಂಸ್ಥೆಯಲ್ಲಿ ಸದಸ್ಯರಾಗಿ ತಮ್ಮ ಹಕ್ಕುಗಳನ್ನು ಪ್ರಶ್ನೆ ಮಾಡುವುದರ ಮೂಲಕ ಪಡೆಯಬೇಕು. ದೇಶದಲ್ಲಿ ನಡೆಯುತ್ತಿರುವ ಕೋಮುವಾದ ಮತ್ತು ಆನ್ಯಾಯ ವಿರುದ್ಧ ಹೋರಾಟ ಮಾಡಲು ತಮ್ಮ ಜೊತೆ ಕೈ ಜೋಡಿಸಬೇಕೆಂದರು.

ಪ್ರತಿಯೊಂದು ಧರ್ಮವು ವೈಶಿಷ್ಯ ಉಳಿಸಿಕೊಂಡು ಸಮನ್ವಯ ಜೀವನ ಸಾಗಿಸಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶ ದುರಂತದಲ್ಲಿದ್ದು, ಆಶಾಂತಿ, ಅಸಹಿಷ್ಣುತೆ ಸೃಷ್ಟಿಯಾಗಿದೆ. ಜಸ್ಟ್ ಆಸ್ಕಿಂಗ್ ಇದರ ವಿರುದ್ದ ಹೋರಾಡಲಿದೆ. ಹಕ್ಕುಗಳನ್ನು ಪ್ರಶ್ನಿಸುತ್ತಿದ್ದ ಪತ್ರಕರ್ತೆ ಗೌರಿ ಹತ್ಯೆಯಾದ ನಂತರ ತಾನು ಪ್ರಶ್ನಿಸಲು ಪ್ರಾರಂಭಿಸಿದ್ದೇನೆ. ಪ್ರಶ್ನಿಸುವವರನ್ನು ಮಟ್ಟ ಹಾಕಿದರೆ ಪ್ರಶ್ನಿಸುವವರ ಸಂಖ್ಯೆ ಹೆಚ್ಚಾಗಲಿದೆ ಎಂದರು.

ನಾವುಗಳು ಧರ್ಮ ವಿರೋಧಿಗಳಲ್ಲ. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವವರ ವಿರೋಧಿಗಳು. ಹೊಸದಾಗಿ ಕೆಲವರು ಮೃದು ಹಿಂದುತ್ವ ಪದ ಸೃಷ್ಟಿಸಿದ್ದಾರೆ. ಜಸ್ಟ್ ಆಸ್ಕಿಂಗ್ ಸಂಸ್ಥೆ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ, ದುಷ್ಟಶಕ್ತಿಗಳ ವಿರುದ್ಧ ದೇಶಭಕ್ತಿಯ ಪಾಠ ಮಾಡಲಿದೆ. ಭಾಷಣ ಮಾಡುವುದನ್ನು ಬಿಟ್ಟು ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಸಾಮಾಜಿಕ ಜಾಲಾತಾಣವನ್ನು ಸಮರ್ಪಕವಾಗಿ ಬಳಸಿಕೊಂಡು ಸಂಬಂಧಿಸಿದವರ ಗಮನ ಸೆಳೆಯುತ್ತಿದೆ.

ರಾಜಕೀಯಕ್ಕೆ ಬರಲು ತನಗೆ ಆಸಕ್ತಿಯಿಲ್ಲ. ದೇಶದ ಬಹುಸಂಖ್ಯಾತರು ಪ್ರಜೆಗಳಾಗಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಅಲ್ಪಸಂಖ್ಯಾತರಾಗಿರುವುದರಿಂದ ಪ್ರಜೆಗಳನ್ನು ಒಗ್ಗೂಡಿಸಿ ಹಕ್ಕುಗಳ ಬಗ್ಗೆ ಪ್ರಶ್ನಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಜಸ್ಟ್ ಆಸ್ಕಿಂಗ್ ರಾಜಕೀಯ ಪಕ್ಷವಾಗುವುದಿಲ್ಲ. ಆಡಳಿತ ಪಕ್ಷಗಳಿಗೆ ಪ್ರತಿಪಕ್ಷವಾಗಿ ಕೆಲಸ ಮಾಡುತ್ತದೆ. ಯಾರಾದರೂ ನಾಯಾಕನಾಗಿ ಜನಪ್ರತಿನಿಧಿಯಾದರೆ ತಕ್ಷಣ ಜಸ್ಟ್ ಆಸ್ಕಿಂಗ್ ಆತನಿಗೆ ಪ್ರತಿಪಕ್ಷವಾಗಿ ಕೆಲಸ ಮಾಡಲಿದೆ ಎಂದರು.

ಸಂವಾದದಲ್ಲಿ ವಿ.ಪಿ. ಶಶಿಧರ್, ಪಿ.ಆರ್. ಭರತ್, ಡಿ.ಎಸ್. ನಿರ್ವಾಣಪ್ಪ, ಕೆ.ಎಂ. ಗಣೇಶ್, ಬಿ.ವೈ. ರಾಜೇಶ್, ಪ್ರೇಮ್‍ಕುಮಾರ್, ಅಲ್ಲಾರಂಡ ವಿಠಲ ನಂಜಪ್ಪ, ಅಬ್ದುಲ್ ರಜಾಕ್, ಕುಂಞಕುಟ್ಟಿ, ಅಣ್ಣಯ್ಯ, ಫಜಲುಲ್ಲಾ, ಎ.ಪಿ. ರಮೇಶ್, ಎಸ್.ಐ. ಮುನೀರ್ ಅಹಮ್ಮದ್, ಕುಂಞ ಅಬ್ದುಲ್ಲಾ, ಅಬ್ಬಾಸ್, ಮಹೇಶ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News