ಮಡಿಕೇರಿಯಲ್ಲಿ ಸಮಾಪನಗೊಂಡ ರೈಡ್ ಫಾರ್ ರೋಟರಿ

Update: 2018-04-23 18:11 GMT

ಮಡಿಕೇರಿ,ಎ.23: ಕರ್ನಾಟಕದ ಗ್ರಾಮೀಣ ಸಂಸ್ಕೃತಿಯನ್ನು ಪರಿಚಯಿಸುವದರೊಂದಿಗೆ ಭಾರತೀಯ ಜನಜೀವನದ ಪರಿಚಯವನ್ನೂ ಮಾಡಿಕೊಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಆಯೋಜಿತವಾಗಿದ್ದ ರೈಡ್ ಫಾರ್ ರೋಟರಿ ಬೈಕ್ ಜಾಥಾ ಮಡಿಕೇರಿಯಲ್ಲಿ ಸಮಾರೋಪಗೊಂಡಿದೆ.

ಮೈಸೂರಿನಿಂದ ಆರಂಭಗೊಂಡ ರೈಡ್ ಫಾರ್ ರೋಟರಿ ಬೈಕ್ ಜಾಥಾದಲ್ಲಿ ಇಂಗ್ಲೆಂಡ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಇಟಲಿ ಸೇರಿದಂತೆ 10 ಬೈಕ್ ಸವಾರರು ಪಾಲ್ಗೊಂಡಿದ್ದರು. ಮೈಸೂರಿನಿಂದ ಹಾಸನ, ಸಾಗರ,ಗೋವಾ, ಕಾರಾವಾರ, ಮಂಗಳೂರು, ಪುತ್ತೂರು, ಸುಳ್ಯ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿದ ಬೈಕ್ ಸವಾರರನ್ನು ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಸ್ವಾಗತಿಸಿದರು.

ಅನಂತರ ನಡೆದ ಸಮಾರಂಭದಲ್ಲಿ ಬೈಕ್ ಸವಾರರು ತಮ್ಮ 2 ಸಾವಿರ ಕಿ.ಮೀ. ಅಂತರದ ಬೈಕ್  ಯಾತ್ರೆಯ ಅನುಭವ ಹಂಚಿಕೊಂಡರು.

ಭಾರತದ ಕರಾವಳಿ, ಮಲೆನಾಡು ಪ್ರದೇಶಗಳ ಸೌಂದರ್ಯವನ್ನು ವೀಕ್ಷಿಸುವದರೊಂದಿಗೆ ಗ್ರಾಮೀಣ ಜನರ ಸುಂದರ ಜೀವನ ಕ್ರಮವನ್ನೂ ಪರಿಚಯಿಸಿಕೊಳ್ಳುವ ಅವಕಾಶ ಬೈಕ್ ಯಾತ್ರೆಯಿಂದ ದೊರಕಿತು. ಅಂತೆಯೇ ಮಾರ್ಗದಲ್ಲಿ ವಿವಿಧ ರೋಟರಿ ಕ್ಲಬ್ ಗಳು ತಮ್ಮ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಸಮಾಜಸೇವಾ ಕಾರ್ಯಗಳನ್ನೂ ವೀಕ್ಷಿಸಿದ್ದು, ಇವುಗಳನ್ನು ತಮ್ಮ ದೇಶದ ರೋಟರಿ  ಕ್ಲಬ್ ಗಳಲ್ಲಿಯೂ ಪರಿಚಯಿಸುವ ಚಿಂತನೆ ಮೂಡಿದೆ ಎಂದು ವಿದೇಶಗಳ ಅನೇಕ ಬೈಕ್ ಸವಾರರು ಹೇಳಿದರು. ತಮ್ಮ ದೇಶದ ತಂಪು ವಾತಾವರಣಕ್ಕೆ ವಿಭಿನ್ನವಾಗಿ ಕರ್ನಾಟಕದ ಕರಾವಳಿಯಲ್ಲಿ 40 ಡಿಗ್ರಿಯಷ್ಟು ತಾಪಮಾನದ ಬಿಸಿಯನ್ನು ಎದುರಿಸಿದ ರೀತಿಯನ್ನೂ ವಿವರಿಸಿದರು.  

ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಮಾತನಾಡಿ, ಇದೊಂದು ಸವಾಲಿನ ಬೈಕ್ ಯಾತ್ರೆಯಾಗಿದ್ದು ವಿವಿಧ ದೇಶಗಳಿಂದ ಬರುವ ಬೈಕ್ ಸವಾರರು ಇಲ್ಲಿನ ಕಿರಿದಾದ ರಸ್ತೆಗೆ ಹೊಂದಿಕೊಂಡು ಬೈಕ್ ಚಲಾಯಿಸುವ ಸವಾಲಿದೆ. ರೋಟರಿಯ ಸಾಮಾಜಿಕ ಚಟುವಟಿಕೆಗಳನ್ನು ವಿದೇಶಿಯರಿಗೆ ಪರಿಚಯಿಸುವ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು. ಭಾರತೀಯ ಮತ್ತು ವಿದೇಶದ ರೋಟರಿ ಸದಸ್ಯರ ಸೌಹಾರ್ದ ಸಂಬಂಧದ ಬೆಸುಗೆಗೂ ರೈಡ್ ಫಾರ್ ರೋಟರಿ ಕಾರಣವಾಗಿದೆ ಎಂದೂ ಸುರೇಶ್ ಚಂಗಪ್ಪ ನುಡಿದರು.

ರೈಡ್ ಫಾರ್ ರೋಟರಿ ಯೋಜನಾ ಸಮಿತಿ ಅಧ್ಯಕ್ಷ ಅನಂತರಾಜ್ , ಸಂಚಾಲಕ  ವೈ.ಎಸ್. ರಾಘವೇಂದ್ರ, 2019 -20 ನೇ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಜೊಸೆಫ್ ಮ್ಯಾಥ್ಯು, ರೋಟರಿ ವಲಯ ಸಹಾಯಕ ಗವರ್ನರ್ ಮಹೇಶ್ ನಲ್ವಾಡೆ, ರೋಟರಿ ಮಡಿಕೇರಿಯ ಅಧ್ಯಕ್ಷ ಪಿ.ಯು. ಪ್ರೀತಮ್, ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ ಸೇರಿದಂತೆ ವಿವಿಧ ರೋಟರಿ ಕ್ಲಬ್ ಗಳ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News