ಹಾಸನ: ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2018-04-23 18:22 GMT

ಹಾಸನ,ಎ.23: ಮೇ.12ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ಇನ್ನು ಒಂದು ದಿನ ಬಾಕಿ ಇರುವಂತೆ ಸೋಮವಾರ ಮದ್ಯಾಹ್ನ ಮೂರು ಪಕ್ಷದಿಂದಲೂ ನಾಮಪತ್ರ ಸಲ್ಲಿಸಲಾಯಿತು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುವ ಸ್ಥಳಕ್ಕೆ ಬರುವ ಮೂಲಕ ತಮ್ಮ ಶಕ್ತಿ ಪ್ರದರ್ಶನವನ್ನು ಪ್ರದರ್ಶಿಸಿದರು.

ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆದಿನ ಆಗಿರುವುದರಿಂದ ಸೋಮವಾರ ನಾಮ ಪತ್ರ ಸಲ್ಲಿಸಲು ಪಕ್ಷದವರಿಂದ ತಮ್ಮ ಬಲಾಬಲಾ ಪ್ರದರ್ಶನ ಎಂಬಂತೆ ಕಂಡು ಬಂದಿತು. ಮೂರು ಪಕ್ಷದಲ್ಲಿ ಮೊದಲು ಬಿಜೆಪಿ ಪಕ್ಷದ ಅಭ್ಯರ್ಥಿ ಕೆಲವರೊಂದಿಗೆ ಮಾತ್ರ ಚುನಾವಣೆ ಅಧಿಕಾರಿಗಳ ಕಛೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ನಂತರ ಜೆಡಿಎಸ್ ಪಕ್ಷವೂ ಬೃಹತ್ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷದವರು ಕೂಡ ಬೃಹತ್ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜೆಡಿಎಸ್ ಪಕ್ಷವು ತಮ್ಮ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್‍ವರೊಂದಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಮುಖಂಡರು ಚನ್ನವೀರಪ್ಪ, ಪಟೇಲ್ ಶಿವರಾಂ, ಕೆ.ಎಂ. ರಾಜೇಗೌಡ, ಕಿರಣ್‍ರಾಜ್ ಇತರರು ಉಪಸ್ಥಿತರಿದ್ದರು. ಅವರು ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಮೂಲಕ ವಿಧಾನಸಭಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಆಗಮಿಸಿದರು. ಈ ವೇಳೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಜೈಕಾರ ಹಾಕಿದರು. 

ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೆಚ್.ಕೆ. ಮಹೇಶ್ ಅವರು ಹಾಸನಾಂಬ ದೇವಾಲಯದ ಆವರಣದಿಂದ ಬೃಹತ್ ಕಾರ್ಯಕರ್ತರೊಂದಿಗೆ ತೆರೆದ ವಾಹನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಪುಟ್ಟರಾಜು ಇತರರೊಂದಿಗೆ ಎನ್.ಆರ್. ವೃತ್ತದ ಮೂಲಕ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಕೆ. ಮಹೇಶ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗಿದ್ದು, ಎಲ್ಲಾ ಜನಾಂಗಕ್ಕೂ ಸಮಾನ ರೀತಿ ಅನೇಕ ಯೋಜನೆಗಳನ್ನು ನೀಡಿರುವುದಾಗಿ ಹೇಳಿದ ಅವರು ಸಿಎಂ ಆಗುವ ಮೊದಲು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ವಚನವನ್ನು ಅನುಷ್ಠಾನಗೊಳಿಸಿದ ಮೊದಲಿಗರು ಎಂದರು.

ಬಿಜೆಪಿ ಪಕ್ಷದಿಂದ ಪ್ರೀತಮ್ ಜೆ. ಗೌಡ ಅವರು ಪಕ್ಷದ ಮುಖಂಡರು ನವೀಲೆ ಅಣ್ಣಪ್ಪ, ಹೆಚ್.ಎಂ. ಸುರೇಶ್ ಕುಮಾರ್ ಇತರ ಜೊತೆ ಬಂದು ನಾಮಪತ್ರವನ್ನು ಸಲ್ಲಿಸಿದರು. 

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದೇನೆ. ಎಲ್ಲಾ ಸಿ.ಟಿ. ರವಿ ಮತ್ತು ಕೇಂದ್ರ ನಾಯಕರೊಂದಿಗೆ ಕಾರ್ಯಕರ್ತರ ಹಾಗೂ ಮುಖಂಡರೊಂದಿಗೆ ಇಂದು ಮಂಗಳವಾರ ಬಂದು ಎ ಮತ್ತು ಬಿ ಫಾರಂನ್ನು ಮೆರವಣಿಗೆ ಮೂಲಕ ಬಂದು ಸಲ್ಲಿಸಲಾಗುವುದು. ನಮ್ಮೊಂದಿಗೆ ಪ್ರತಿ ಸ್ಪರ್ಧಿ ಎನ್ನುವುದಕ್ಕಿಂತ ಹಾಸನದ ಜನ ಒಂದು ಬದಲಾವಣೆ ಬಯಸಿದ್ದಾರೆ. ಇಲ್ಲಿನ ಅಭಿವೃದ್ಧಿಗೊಸ್ಕರ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ಜನರಿಗೆ ಸಂಬಂಧಪಟ್ಟಿದೆ ಎಂದರು. ಪಕ್ಷದಲ್ಲಿ ಅಭ್ಯರ್ಥಿ ವಿಚಾರ ಯಾವ ಗೊಂದಲ ಇರುವುದಿಲ್ಲ. ಈಗಾಗಲೇ ನಿವಾರಣೆಯಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಲು ಪಕ್ಷ ಸೂಚನೆ ಕೊಟ್ಟಿದೆ. ವರಿಷ್ಟರು ಇಂದು ಮಂಗಳವಾರ ಯಾವ ಸಮಯ ತಿಳಿಸುತ್ತಾರೆ ಆಗ ಬಿ ಫಾರಂನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ನಂತರ ಶಿವಸೇನೆಯಿಂದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಕೂಡ ಸೋಮವಾರ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಸೋಮವಾರ ಒಂದೆ ದಿನ ಒಟ್ಟು 6 ನಾಮಪತ್ರಗಳನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News