2019ರ ವಿಶ್ವಕಪ್ ಬಳಿಕ ಕ್ರಿಕೆಟ್‌ನಿಂದ ನಿವೃತ್ತಿ: ಯುವರಾಜ್‌ಸಿಂಗ್

Update: 2018-04-23 18:41 GMT

ಹೊಸದಿಲ್ಲಿ, ಎ.23: ಆಲ್‌ರೌಂಡರ್ ಯುವರಾಜ್ ಸಿಂಗ್ 2017 ಜೂನ್‌ನಲ್ಲಿ ಭಾರತದ ಪರ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ್ದರು. ಆನಂತರ ತಂಡದಿಂದ ದೂರವಾಗಿರುವ ಯುವಿ ಮತ್ತೆ ತಂಡಕ್ಕೆ ಮರಳಿ ಬರುವ ಕನಸು ಕಾಣುತ್ತಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 2019ರಲ್ಲಿ ನಡೆಯಲಿರುವ ವಿಶ್ವಕಪ್ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಎರಡು ದಶಕಗಳಿಂದ ದೇಶಕ್ಕಾಗಿ ಆಡುತ್ತಿದ್ದೇನೆ. ಎಂದಾದರೂ ನಿವೃತ್ತಿ ಅನಿವಾರ್ಯ. ವಿಶ್ವಕಪ್ ಬಳಿಕ ನಿವೃತ್ತಿಯಾಗುವುದಾಗಿ 36ರ ಹರೆಯದ ಯುವರಾಜ್ ಸಿಂಗ್ ಹೇಳಿದ್ದಾರೆ.

 ಯುವರಾಜ್ ಸಿಂಗ್ ಇದೀಗ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದಲ್ಲಿ ಆಡುತ್ತಿದ್ದಾರೆ. ತಂಡವನ್ನು ಸೆಮಿಫೈನಲ್ (ಪ್ಲೇ ಆಫ್) ತಲುಪಿಸುವುದು ತಮ್ಮ ಗುರಿಯಾಗಿದೆ ಎಂದು ಯುವರಾಜ್ ಸಿಂಗ್ ಹೇಳಿದರು.

‘‘ಕಿಂಗ್ಸ್ ಇಲೆವೆನ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲಿಷ್ಠವಾಗಿದೆ. ಈ ಕಾರಣದಿಂದಾಗಿ ತಂಡಕ್ಕೆ ಅಂತಿಮವಾಗಿ ಅಗ್ರ ನಾಲ್ಕರ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಾವುದೇ ಸಮಸ್ಯೆ ಇಲ್ಲ ’’ಎಂದರು.

ಎ.19ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ದಾಂಡಿಗ ಕ್ರಿಸ್ ಗೇಲ್ ಅವರು ಸನ್‌ರೈಸರ್ಸ್‌ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್‌ ತಂಡ ಪ್ರಶಸ್ತಿ ಗೆಲ್ಲಲು ತೀವ್ರ ಪೈಪೋಟಿ ನಡೆಸಲಿದೆ. ಚೆನ್ನೈ ಸ್ಥಿರಪ್ರದರ್ಶನ ನೀಡುವ ತಂಡವಾಗಿದೆ. ಕೆಕೆಆರ್ ಉತ್ತಮ ತಂಡವಾಗಿದೆ. ನನ್ನ ಪ್ರಕಾರ ಐಪಿಎಲ್‌ನಲ್ಲಿ ಇವೆರಡು ಅತ್ಯುತ್ತಮ ತಂಡವಾಗಿವೆ ಎಂದು ಯುವರಾಜ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News