ಶ್ರೀರಾಮುಲು ರಾಜಕಾರಣ ತಿಳಿದು ಮಾತನಾಡಲಿ: ಸಿದ್ದರಾಮಯ್ಯ

Update: 2018-04-24 07:58 GMT

ಮೈಸೂರು, ಎ.24: ನಾನು 1983ರಲ್ಲೇ ಶಾಸಕನಾದವನು, ಶ್ರೀರಾಮುಲು ಶಾಸಕನಾಗಿದ್ದು 2004ರಲ್ಲಿ. ಅವರು ರಾಜಕಾರಣವನ್ನು ತಿಳಿದು ಆಮೇಲೆ ಮಾತನಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಲು ಮಂಗಳವಾರ ಬೆಳಗ್ಗೆ ತೆರಳುವ ಮುನ್ನ ತಮ್ಮ ನಿವಾಸ ಟಿ.ಕೆ.ಲೇಔಟ್‌ನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ‘‘ಚಾಮುಂಡೇಶ್ವರಿ ಈಗಾಗಲೇ ತಿರಸ್ಕಾರ ಮಾಡಿದ್ದಾಳೆ. ಬನಶಂಕರಿ ತಿರಸ್ಕಾರ ಮಾಡುತ್ತಾಳೆ’’ ಅನ್ನೋ ಶ್ರೀರಾಮುಲು ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳಂಕಿತ ವ್ಯಕ್ತಿ. ಅವರನ್ನು ರಾಜ್ಯದ ಜನ ಒಪ್ಪುವುದಿಲ್ಲ, ಬಿಜೆಪಿಯಿಂದ ವರುಣಾದಲ್ಲಿ ಯಾರು ನಿಂತರೂ ಸೋಲು ಗ್ಯಾರಂಟಿ ಎಂದ ಸಿದ್ದರಾಮಯ್ಯ, ಅವರ ಪುತ್ರ ರಾಘವೇಂದ್ರ ಅವರಿಗೆ ಟಿಕೆಟ್ ನೀಡಿ ಸಂಸದ, ಶಾಸಕ ಮಾಡಿದ್ದಾರೆ. ಹಾಗಿದ್ದರೆ ರಾಘವೇಂದ್ರ ಯಾರ ಮಗ, ಇದು ವಂಶ ಪಾರಂಪರ್ಯ ರಾಜಕಾರಣ ಅಲ್ಲವೇ ಎಂದು ಪ್ರಶ್ನಿಸಿದರು.

ಸಮೀಕ್ಷೆಯಲ್ಲಿ ಶೇ.30ರಷ್ಟ ಮಂದಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದಿದ್ದಾರಲ್ಲ, ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಅಂತ ತಾನೇ ರಾಜ್ಯದ ಜನ ಹೇಳಿರುವುದು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಜನ ಬಯಸಿದ್ದಾರೆ, ನಾನು ಸಮೀಕ್ಷೆಗಳನ್ನು ನಂಬುವುದಿಲ್ಲ, ನಾನು ಸಹ ಸರ್ವೇ ಮಾಡಿಸಿದ್ದೇನೆ. ನಾವೇ ಅಧಿಕಾರಕ್ಕೆ ಬರುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲ, 15 ಕ್ಷೇತ್ರಗಳಲ್ಲಿ ಒಂದರಲ್ಲೂ ಬಿಜೆಪಿ ಗೆದ್ದಿಲ್ಲ, ಇನ್ನು ಈಗ ಅಧಿಕಾರಕ್ಕೆ ಬರಲು ಸಾಧ್ಯವೇ? ಇನ್ನು ಜೆಡಿಎಸ್ ಪಕ್ಷವಾದರು ಮೂರು ಕಡೆ ಗೆದ್ದಿದ್ದಾರೆ, ಬಿಜೆಪಿಯವರಿಗೆ ಅಷ್ಟಾದರು ಇಲ್ಲ, ಯಾರೇ ನಮ್ಮ ಎದುರಾಳಿಗಳಾದರು ಗೆಲವು ನಮ್ಮದೇ ಎಂದು ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಅಪರಾಹ್ನ 2ರಿಂದ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸುತ್ತೇನೆ. ಅಲ್ಲಿನ ಜನರ ಪ್ರೀತಿ ವಿಶ್ವಾಸ ನನ್ನ ಮೇಲಿದೆ ಎಂದು ಹೇಳಿದರು.

* ಬಾದಾಮಿಗೆ ಆಗಮಿಸಿದ ಸಿದ್ದರಾಮಯ್ಯ
 ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲಿರುವ ಮುಖ್ಯಮಂತ್ರಿ ಮೈಸೂರಿನಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಅಲ್ಲಿಂದ ಮುಖ್ಯಮಂತ್ರಿ ರಸ್ತೆ ಮಾರ್ಗವಾಗಿ ಬಾದಾಮಿಗೆ ತೆರಳಿದರು. ಈ ಸಂದರ್ಭ ಮುಖ್ಯಮಂತ್ರಿಗೆ ಅಭಿಮಾನಿಗಳು ನೂರಾರು ಎತ್ತಿನಗಾಡಿಗಳ ಮೂಲಕ ಆಗಮಿಸಿ ಸ್ವಾಗತ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News