ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಶಾಸಕ ಅಂಬರೀಶ್

Update: 2018-04-24 13:54 GMT

ಬೆಂಗಳೂರು, ಎ.24: ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೊಂದಲಕ್ಕೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಮಾಜಿ ಸಚಿವ ಹಾಗೂ ನಟ ರೆಬೆಲ್ ಸ್ಟಾರ್ ಅಂಬರೀಶ್ ತೆರೆ ಎಳೆದಿದ್ದು, ತಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಮಂಗಳವಾರ ನಗರದ ಗಾಲ್ಫ್‌ಕೋರ್ಸ್ ಬಳಿಯಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನಾರೋಗ್ಯದ ಕಾರಣದಿಂದಾಗಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಈಗ ನನಗೆ 66 ವರ್ಷ, ಈ ವಿಧಾನಸಭೆಯ ಅವಧಿ ಮುಗಿಯುವಾಗ ನನಗೆ 71 ವರ್ಷ ಆಗಿರುತ್ತದೆ. ಆ ವಯಸ್ಸಿನಲ್ಲಿ ನನಗೆ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದರು.

ಎಲ್ಲರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲೂ ಸಾಧ್ಯವಿಲ್ಲ. 84 ವರ್ಷವಾದರೂ ಯಾವ ವೇಗದಲ್ಲಿ ಅವರು ಎಲ್ಲಿರುತ್ತಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ದಿಲ್ಲಿಯಲ್ಲಿರುವ ಅವರು ಕೆಲವೆ ಸಮಯದಲ್ಲಿ ರಾಯಚೂರಿನಲ್ಲಿರುತ್ತಾರೆ. ಅವರಂತೆ, ಈ ಓಡಾಡಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಅಂಬರೀಶ್ ಹೇಳಿದರು.

ಇದೇ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಮ್ಮ ಬದಲು ಬೇರೆ ಅಭ್ಯರ್ಥಿ ಹೆಸರನ್ನು ಸೂಚಿಸಬಹುದಿತ್ತಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅಭ್ಯರ್ಥಿಯನ್ನು ಸೂಚಿಸಿದರೆ, ಅವರ ಪರವಾಗಿ ಪ್ರಚಾರಕ್ಕೆ ನಾನು ಹೋಗಬೇಕು. ಪ್ರಚಾರದಲ್ಲಿ ತೊಡಗಲು ಸಾಧ್ಯವಾಗಿದ್ದರೆ ನಾನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೆ ಎಂದರು.

ನನ್ನ ಆರೋಗ್ಯ ಪ್ರಚಾರದಲ್ಲಿ ತೊಡಗಲು ಸಹಕರಿಸುತ್ತಿಲ್ಲ. ಆದುದರಿಂದ, ಮನೆಯಲ್ಲಿದ್ದೇನೆ. ಹೀಗಾಗಿ, ಬೇರೆ ಯಾವ ಅಭ್ಯರ್ಥಿಯ ಹೆಸರನ್ನು ಸೂಚಿಸಿಲ್ಲ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಅವರಿಗೆ ನನ್ನ ಬೆಂಬಲ ಇರುತ್ತದೆ. ರಮ್ಯಾಗೆ ಟಿಕೆಟ್ ನೀಡಬಹುದಿತ್ತು. ಗಣಿಗ ರವಿಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ ಎಂದು ಅಂಬರೀಶ್ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ನನ್ನ ಬಗ್ಗೆ ನೀಡಿರುವ ಹೇಳಿಕೆಯಿಂದ ಸ್ವಲ್ಪ ನೋವಾಗಿದೆ. ಆದರೆ, ಅವರ ಹೇಳಿಕೆಯಿಂದಾಗಿಯೆ ನಾನು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ನನ್ನ ಅನಾರೋಗ್ಯ ಹಾಗೂ ವಯಸ್ಸಿನ ಕಾರಣಕ್ಕಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ ಎಂದು ಅವರು ತಿಳಿಸಿದರು.

ಮಂಡ್ಯಕ್ಕೆ ಮಾತ್ರ ಸೀಮಿತವಲ್ಲ: ನಾನು ಇಡೀ ರಾಜ್ಯದಿಂದ ಮತಗಳನ್ನು ತರುವ ಶಕ್ತಿ ಹೊಂದಿದ್ದೇನೆ. ನಾನು ರಾಜ್ಯ ಮಟ್ಟದ ನಾಯಕ. ನನ್ನನ್ನು ಮಂಡ್ಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಮಂಡ್ಯದಲ್ಲಿ ನಾನಿಲ್ಲದಿದ್ದರೆ ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ. ಎಲ್ಲ ವಿಚಾರವನ್ನು ಆಲೋಚಿಸಿಯೇ ನಾನು ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಅಂಬರೀಶ್ ಹೇಳಿದರು.

ರಾಜ್ಯ ನಾಯಕರು ನನ್ನ ಮನವೊಲಿಕೆಗೆ ಪ್ರಯತ್ನಿಸಿದರು. ಕ್ಷೇತ್ರದ ಕಾರ್ಯಕರ್ತರೂ ಒತ್ತಾಯ ಮಾಡಿದರು. ಆದರೆ, ನಾನು ಕಳೆದ 7-8 ತಿಂಗಳಿಂದ ಕ್ಷೇತ್ರಕ್ಕೆ ಹೋಗಿಲ್ಲ. ಈಗ ಹೋದರೆ ನನಗೆ ಮತ ಹಾಕುತ್ತಾರಾ? ನನಗೆ ಎಲ್ಲ ಪಕ್ಷಗಳಲ್ಲಿಯೂ ಆತ್ಮೀಯರಿದ್ದಾರೆ. ಬಯಸಿದರೆ ಯಾವ ಪಕ್ಷ ಬೇಕಾದರೂ ಸೇರಬಹುದು. ಆದರೆ, ನನಗೆ ರಾಜಕೀಯ ಮಾಡುವ ಶಕ್ತಿ ಇಲ್ಲವಾಗಿದೆ ಎಂದು ಅವರು ನುಡಿದರು.

ಬಿಜೆಪಿಯ ಎಂಟು ಮಂದಿ ಪ್ರಮುಖ ನಾಯಕರು ನನ್ನ ಮನೆಗೆ ಬಂದಿದ್ದರು. ನೀವು ಬೆಂಗಳೂರಿನ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ, ಪ್ರಚಾರಕ್ಕೆ ಬರುವುದು ಬೇಡ, ಮನೆಯಲ್ಲೆ ಇದ್ದರೂ ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದಿದ್ದರು. ಆದರೆ, ನಾನು ಮಂಡ್ಯದ ಗಂಡಾಗಿ ಮಂಡ್ಯ ಬಿಡಲು ಸಾಧ್ಯವೇ ಎಂದು ಅಂಬರೀಶ್ ಹೇಳಿದರು.

ಎರಡು ಕ್ಷೇತ್ರಗಳಲ್ಲಿ ಸಿಎಂ ಸ್ಪರ್ಧೆ ಸರಿಯಲ್ಲ: ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ತನ್ನ ತವರು ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದಲೂ ಕಣಕ್ಕಿಳಿಯುತ್ತಿರುವುದು ನನ್ನ ಮನಸ್ಸಿಗೆ ಅಷ್ಟು ತೃಪ್ತಿ ತಂದಿಲ್ಲ ಎಂದು ಅಂಬರೀಶ್ ತಿಳಿಸಿದರು.

ಸೋಲು, ಗೆಲುವು ಯಾವುದೇ ಇರಲಿ ಮುಖ್ಯಮಂತ್ರಿಯಾಗಿರುವವರು ಎದುರಿಸಬೇಕು. ನನ್ನ ಜೀವನದಲ್ಲಿ ಯಾರ ಬಗ್ಗೆಯೂ ಬೇಸರಗೊಂಡಿಲ್ಲ. ಅದೇ ರೀತಿ ಮುಖ್ಯಮಂತ್ರಿ ಬಗ್ಗೆಯೂ ಯಾವುದೆ ಬೇಸರವಿಲ್ಲ. ಖಳನಾಯಕನಾಗಿ, ನಂತರ ನಾಯಕನಾಗಿ ಬೆಳೆದವನು ನಾನು ಎಂದು ಅಂಬರೀಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News