ಬಾಲಕಿ ಮೇಲೆ ಅತ್ಯಾಚಾರ: ಅಸಾರಾಂ ಬಾಪು ದೋಷಿ

Update: 2018-04-25 05:47 GMT

ಹೊಸದಿಲ್ಲಿ, ಎ.25: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಜೋಧ್‌ಪುರ ಜೈಲು ಆವರಣದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ್ ಶರ್ಮಾ ಬಾಪು ಹಾಗೂ ಇತರ ಐವರು ತಪ್ಪಿತಸ್ಥರು ಎಂದು ತೀರ್ಪು ನೀಡಿದರು.

 ಉತ್ತರಪ್ರದೇಶದ ಸಹರಾನ್ಪುರದ 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ 2013ರಲ್ಲಿ ಬಾಬಾನನ್ನು ಬಂಧಿಸಲಾಗಿತ್ತು. ಜೋಧಪುರದ ಹೊರವಲಯದಲ್ಲಿರುವ ಆಶ್ರಮದಲ್ಲಿ ಬಾಬಾ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆೆ ಎಂದು ಬಾಲಕಿ ಆರೋಪಿಸಿದ್ದಳು. ಬಾಬಾ ವಿರುದ್ದ ಪೋಕ್ಸೊ ಕಾಯ್ದೆ ಹಾಗೂ ಎಸ್‌ಸಿ, ಎಸ್ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

77ರ ಪ್ರಾಯದ ಬಾಬಾ ವಿರುದ್ಧ ಮಾನವಕಳ್ಳಸಾಗಾಣಿಕೆೆ, ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ಅಪರಾಧ ಪ್ರಕರಣವೂ ದಾಖಲಾಗಿದೆ. 2013ರ ಸೆ.1 ರಂದು ಅಸಾರಾಂನನ್ನು ಇಂದೋರ್‌ನಲ್ಲಿ ಬಂಧಿಸಿ ಜೋಧ್‌ಪುರ ಸೆಂಟ್ರಲ್ ಜೈಲಿನಲ್ಲಿ ಇಡಲಾಗಿತ್ತು. ಈಗಲೂ ಅಸಾರಾಂ ನ್ಯಾಯಾಂಗ ಕಸ್ಟಡಿಯಲ್ಲಿದ್ದಾನೆೆ. ಬಾಬಾ ಹಾಗೂ ಆತನ ಪುತ್ರ ನಾರಾಯಣ ಸಾಯಿ ವಿರುದ್ಧ ಗುಜರಾತ್‌ನಲ್ಲಿ ಇಬ್ಬರು ಸಹೋದರಿಯರು ಪ್ರತ್ಯೇಕವಾಗಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ವಿಚಾರಣೆ ಆರಂಭವಾದ ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಪ್ರಕರಣದ 9 ಸಾಕ್ಷಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಪೈಕಿ ಮೂವರು ಸಾಕ್ಷಿಗಳನ್ನು ಹತ್ಯೆಗೈಯಲಾಗಿದೆ. ಬಾಬಾ 12 ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಆರು ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ರಾಜಸ್ಥಾನ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಲಾ ಮೂರು ಬಾರಿ ಅರ್ಜಿಗಳನ್ನು ತಿರಸ್ಕರಿಸಿವೆ.

 ಬಾಬಾ ವಿರುದ್ಧ ತೀರ್ಪು ಹಿನ್ನೆಲೆಯಲ್ಲಿ ರಾಜಸ್ಥಾನದ ಜೋಧ್‌ಪುರದ ಸುತ್ತಮುತ್ತಲಿನ ಪ್ರದೇಶ, ಹರ್ಯಾಣ ಸಹಿತ ಮೂರು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News