ರಾಜಕೀಯ ಬಲಾಢ್ಯರಿಂದ ಅಧಿಕಾರ ಮರಳಿ ಪಡೆಯಲು ಅವಕಾಶ: ದೇವನೂರು ಪುಟ್ಟನಂಜಯ್ಯ

Update: 2018-04-25 06:42 GMT

ಮೈಸೂರು, ಎ.25: ದಲಿತರು ಮತ್ತು ಮುಸ್ಲಿಮರನ್ನು ರಾಜಕೀಯ ಮುಖ್ಯವಾಹಿನಿಯಿಂದ ತಡೆದಿರುವ ಇಲ್ಲಿನ ರಾಜಕೀಯ ಬಲಾಢ್ಯರ ಕೈಯಿಂದ ಅಧಿಕಾರ ಮರಳಿ ಪಡೆಯುವ ಅವಕಾಶವನ್ನು ಎಸ್‌ಡಿಪಿಐ ತೆರೆದುಕೊಟ್ಟಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಹೇಳಿದ್ದಾರೆ.

ಮೈಸೂರಿನ ಉದಗಿರಿಯಲ್ಲಿ ಮಂಗಳವಾರ ಎಸ್‌ಡಿಪಿಐ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಅಲ್ಪಸಂಖ್ಯಾತರಾದ ಮುಸ್ಲಿಂ, ದಲಿತ ಹಾಗೂ ಹಿಂದುಳಿದ ಸಮುದಾಯದವರನ್ನು ಎಲ್ಲಾ ರಾಜಕೀಯ ಪಕ್ಷಗಳು ದಮನಿಸಲು ಪ್ರಯತ್ನಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಸ್‌ಡಿಪಿಐ ಅವರಿಗೆ ಆತ್ಮಸ್ಥೈರ್ಯವನ್ನು ನೀಡುತ್ತಾ, ರಾಜಕೀಯದಲ್ಲಿ ಸಬಲೀಕರಣಗೊಳಿಸುವ ಎಲ್ಲಾ ರೀತಿಯ ಕಾರ್ಯತಂತ್ರವನ್ನು, ಪ್ರಬುದ್ಧತೆಯನ್ನು ನೀಡಿ ಭದ್ರತೆಯಿರುವ ನಾಳೆಯ ದಿನಗಳಿಗಾಗಿ ಸಜ್ಜುಗೊಳಿಸುತ್ತಿದೆ. ಎಸ್‌ಡಿಪಿಐ ಯು ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ರಾಜ್ಯದಲ್ಲೆಡೆ ಶೋಷಿತರ ಧ್ವನಿಯಾಗಿ ಗುರುತಿಸಲ್ಪಟ್ಟಿರುವ ಅಬ್ದುಲ್ ಮಜೀದ್‌ರನ್ನು ಬಹುಮತಗಳಿಂದ ಚುನಾಯಿಸುವುದರ ಮೂಲಕ ದೇಶದಲ್ಲೇ ನವ ಇತಿಹಾಸವನ್ನು ನಿರ್ಮಾಣ ಮಾಡಬೇಕಾಗಿದೆ ಎಂದರು.

ಎಸ್‌ಡಿಪಿಐ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿದರು.

ಈ ಸಂದರ್ಭ ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಆಲೂರು ಮಲ್ಲಣ್ಣ, ಕಾರ್ಯದರ್ಶಿ ಕೌಶನ್ ಬೇಗ್, ಪಿಎಫ್‌ಐ ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಕಾರ್ಪೊರೇಟರ್ ಎಸ್.ಸ್ವಾಮಿ, ಪ್ರಸನ್ನ ಚಕ್ರವರ್ತಿ, ಮೌಲಾನಾ ಇಸ್ಮಾಯೀಲ್, ಅಕ್ರಮ್ ಶರೀಫ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಡಿಪಿಐ ಮೈಸೂರು ನಗರಾಧ್ಯಕ್ಷ ಆಝಾಂ ಪಾಶ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್‌ಡಿಪಿಐ ಮೈಸೂರು ಜಿಲ್ಲಾ ಮಾಧ್ಯಮ ಸಂಯೋಜಕ ತಬ್ರೇಝ್ ಸೇಠ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News