ಸುಪ್ರೀಂ ಕೋರ್ಟ್ ಭವಿಷ್ಯದ ಬಗ್ಗೆ ಚರ್ಚಿಸಲು 'ಸಂಪೂರ್ಣ ನ್ಯಾಯಾಲಯ' ಅಧಿವೇಶನ ಕರೆಯಿರಿ

Update: 2018-04-25 07:05 GMT

ಹೊಸದಿಲ್ಲಿ, ಎ.25: ವಿಪಕ್ಷಗಳು ಸಲ್ಲಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪದಚ್ಯುತಿ ನಿಲುವಳಿ ನೋಟಿಸನ್ನು ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ ಬೆನ್ನಲ್ಲೇ ಸುಪ್ರೀಂ ಕೋರ್ಟಿನ ಇಬ್ಬರು ಅತ್ಯಂತ ಹಿರಿಯ ನ್ಯಾಯಾಧೀಶರುಗಳಾದ ಜಸ್ಟಿಸ್ ರಂಜನ್ ಗೊಗೋಯಿ ಹಾಗೂ ಜಸ್ಟಿಸ್ ಮದನ್ ಲೋಕೂರ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ  ಪತ್ರವೊಂದನ್ನು ಬರೆದು  ಉನ್ನತ  ನ್ಯಾಯಾಲಯದ ಭವಿಷ್ಯ ಹಾಗೂ ಸಾಂಸ್ಥಿಕ ವಿಚಾರಗಳ ಬಗ್ಗೆ ಚರ್ಚಿಸಲು `ಸಂಪೂರ್ಣ ನ್ಯಾಯಾಲಯ'' (ಫುಲ್ ಕೋರ್ಟ್) ಅಧಿವೇಶನವನ್ನು ಕರೆಯಬೇಕು ಎಂದು ಆಗ್ರಹಿಸಿದ್ದಾರೆ.

ಜಸ್ಟಿಸ್ ಗೊಗೋಯಿ ಅವರು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಂಬುದು ಇಲ್ಲಿ ಉಲ್ಲೇಖಾರ್ಹ. ಕೊಲಿಜಿಯಂ ಸದಸ್ಯರೂ ಆಗಿರುವ ಇಬ್ಬರು ನ್ಯಾಯಾಧೀಶರು ಸಲ್ಲಿಸಿರುವ ಎರಡು ವಾಕ್ಯಗಳ ಪತ್ರಕ್ಕೆ ಮುಖ್ಯ ನ್ಯಾಯಮೂರ್ತಿ ಇಲ್ಲಿಯ ತನಕ ಪ್ರತಿಕ್ರಿಯಿಸಿಲ್ಲ. ಸೋಮವಾರ ಬೆಳಗ್ಗೆ ಎಲ್ಲಾ ನ್ಯಾಯಾಧೀಶರು ಪದ್ಧತಿಯಂತೆ ಚಹಾದ ಸಮಯ ಸಭೆಯೊಂದರಲ್ಲಿ ಭಾಗವಹಿಸಿದಾಗಲೂ ಈ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಮಿಶ್ರಾ ತಮ್ಮ ನಿರ್ಧಾರ ಪ್ರಕಟಿಸಿಲ್ಲ.

ಸಾಮಾನ್ಯವಾಗಿ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಯಿರುವಾಗ ಮಾತ್ರ 'ಫುಲ್ ಕೋರ್ಟ್' ಸಭೆಗಳನ್ನು ಆಯೋಜಿಸಲಾಗುತ್ತದೆ. ಇದಕ್ಕೂ ಮೊದಲು ಮಾರ್ಚ್ 21ರಂದು ಸುಪ್ರೀಂ ಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಜಸ್ಟಿಸ್ ಚೆಲಮೇಶ್ವರ್ ಅವರು ಎಲ್ಲಾ ನ್ಯಾಯಾಧೀಶರುಗಳಿಗೆ ಪತ್ರ ಬರೆದು  ಹೈಕೋರ್ಟಿಗೆ ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಸರಕಾರದ ಹಸ್ತಕ್ಷೇಪ ವಿಚಾರವನ್ನು ಚರ್ಚಿಸಲು 'ಫುಲ್ ಕೋರ್ಟ್' ಅಧಿವೇಶನ ನಡೆಸಬೇಕೆಂದು ಕೋರಿದ್ದರು. ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳಿಸುವಂತೆ ಕೊಲಿಜಿಯಂ ಮಾಡಿದ  ಶಿಫಾರಸಿದ್ದರೂ  ಸರಕಾರ ನೇರವಾಗಿ ಕರ್ನಾಟಕ ಹೈಕೋರ್ಟಿಗೆ ಪತ್ರ ಬರೆದಿದ್ದನ್ನು ವಿರೋಧಿಸಿ ಜಸ್ಟಿಸ್ ಚೆಲಮೇಶ್ವರ್ ಪತ್ರ ಬರೆದಿದ್ದರು. ಇದಕ್ಕೂ ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿರಲಿಲ್ಲ.

ಎಪ್ರಿಲ್ 9ರಂದು ಜಸ್ಟಿಸ್ ಕುರಿಯನ್ ಜೋಸೆಫ್ ಕೂಡ ಸಿಜೆಐ ಹಾಗೂ ಎಲ್ಲಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದು ಜಸ್ಟಿಸ್ ಕೆ.ಎಂ. ಜೊಸೆಫ್ ಹಾಗೂ ಇಂದು ಮಲ್ಹೋತ್ರ ಅವರನ್ನು  ಸುಪ್ರೀಂ ಕೋರ್ಟಿಗೆ ನೇಮಕಗೊಳಿಸುವ ಕುರಿತು ಕೊಲೀಜಿಯಂ ಶಿಫಾರಸನ್ನು ಅನುಮೋದಿಸಲು ಸರಕಾರ ವಿಳಂಬಿಸುತ್ತಿರುವ ವಿಚಾರ ಚರ್ಚಿಸಲು ಏಳು ನ್ಯಾಯಾಧೀಶರ ಪೀಠ ರಚಿಸುವಂತ ಕೋರಿದ್ದರು.

ಇತ್ತೀಚೆಗೆ ಪತ್ರ ಬರೆದ ನಾಲ್ಕು ಮಂದಿ ನ್ಯಾಯಾಧೀಶರೂ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿಯೇ ಸುಪ್ರೀಂ ಕೋರ್ಟ್ ಕಾರ್ಯಶೈಲಿಯ ಬಗ್ಗೆ ಅಸಮಾಧಾನ ಸೂಚಿಸಿ ಸಿಜೆಐಗೆ ಪತ್ರ ಬರೆದು ಪತ್ರಿಕಾಗೋಷ್ಠಿಯೊಂದರಲ್ಲಿ ಅದನ್ನು ಬಹಿರಂಗ ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News