ಸೈನಾ, ಸಿಂಧು, ಶ್ರೀಕಾಂತ್ 2ನೇ ಸುತ್ತಿಗೆ ಲಗ್ಗೆ

Update: 2018-04-25 18:55 GMT

ವುಹಾನ್, ಎ.25: ಇತ್ತೀಚೆಗೆ ಕೊನೆಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಪೂರ್ವ ಪ್ರದರ್ಶನ ನೀಡಿರುವ ಭಾರತದ ಶಟ್ಲರ್‌ಗಳಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ಹಾಗೂ ಸಿಂಧು ನೇರ ಗೇಮ್‌ಗಳಿಂದ ಜಯ ಸಾಧಿಸಿ ಎರಡನೇ ಸುತ್ತಿಗೆ ತೇರ್ಗಡೆಯಾದರು. ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ವೀರೋಚಿತ ಪ್ರದರ್ಶನ ನೀಡಿದರು. ಗೋಲ್ಡ್‌ಕೋಸ್ಟ್ ನಲ್ಲಿ ಚಿನ್ನದ ಪದಕ ಜಯಿಸಿರುವ ಸೈನಾ ಉತ್ತಮ ಪ್ರದರ್ಶನ ಮುಂದುವರಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಗಾಪುರದ ಯಿಯೊ ಜಿಯಾ ಮಿನ್‌ರನ್ನು 21-12, 21-9 ಗೇಮ್‌ಗಳಿಂದ ಮಣಿಸಿದರು.

ಕಾಮನ್‌ವೆಲ್ತ್ ಫೈನಲ್‌ನಲ್ಲಿ ಸೈನಾಗೆ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು ಚೈನೀಸ್ ತೈಪೆಯ ಪೈ ಯು ಪೊರನ್ನು 21-14, 21-19 ಅಂತರದಿಂದ ಸೋಲಿಸಿದರು.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ಮುಂದಿನ ಸುತ್ತಿನಲ್ಲಿ ಚೀನಾದ ಗಾವೊ ಫಾಂಗ್‌ಜೀ ಅವರನ್ನು, ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಸಿಂಧು ಚೈನೀಸ್‌ತೈಪೆಯ ಇನ್ನೋರ್ವ ಆಟಗಾರ್ತಿ ಚೆನ್ ಕ್ಷಿಯಾಕ್ಸಿನ್‌ರನ್ನು ಎದುರಿಸಲಿದ್ದಾರೆ.

 ಅಗ್ರ ಶ್ರೇಯಾಂಕದ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಜಪಾನ್‌ನ ಕೆಂಟಾ ನಿಶಿಮೊಟೊರನ್ನು 13-21, 21-16,21-16 ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್‌ರನ್ನು ಎದುರಿಸಲಿದ್ದಾರೆ.

ಏಳನೇ ಶ್ರೇಯಾಂಕದ ಚೈನೀಸ್ ತೈಪೆಯ ಆಟಗಾರ ಚೌ ಟಿಯೆನ್ ಚೆನ್‌ರನ್ನು ಎದುರಿಸಿದ ಸಮೀರ್ ವರ್ಮ 21-23, 17-21 ಅಂತರದಿಂದ ಸೋತರು.

ಮಿಶ್ರ ಡಬಲ್ಸ್ ಜೋಡಿ ಸೌರಭ್ ಶರ್ಮ ಹಾಗೂ ಅನುಷ್ಕಾ ಪಾರಿಕ್ ಕೊರಿಯಾದ ಕಿಮ್ ವಾನ್ ಹೊ ಹಾಗೂ ಶಿನ್ ಸೆಯುಂಗ್ ಚಾನ್ ವಿರುದ್ಧ 17-21, 14-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News