ಮೈಸೂರು ವಿವಿ ಪ್ರಾಧ್ಯಾಪಕರ ಅಮಾನತ್ತಿನ ಹಿಂದೆ ಪ್ರತಾಪ್ ಸಿಂಹ, ಸಂಘಪರಿವಾರದ ಕೈವಾಡ: ಕೆ.ಎಸ್.ಶಿವರಾಮ್ ಆರೋಪ

Update: 2018-04-26 14:28 GMT

ಮೈಸೂರು,ಎ.26:ಮೈಸೂರು ವಿವಿ ಪ್ರಾಧ್ಯಾಪಕರಾದ ಪ್ರೊ.ಮಹೇಶ್ ಚಂದ್ರಗುರು, ಅರವಿಂದ ಮಾಲಗತ್ತಿ ಅವರ ಅಮಾನತ್ತಿನ ಹಿಂದೆ ಸಂಸದ ಪ್ರತಾಪ್ ಸಿಂಹ ಹಾಗೂ ಸಂಘಪರಿವಾರದ ಕೈವಾಡವಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೊ.ಮಹೇಶ್ ಚಂದ್ರಗುರು ಹಾಗು ಅರವಿಂದ ಮಾಲಗತ್ತಿ ಯಾವುದೇ ಒಂದು ಪಕ್ಷದ ಪರ ಚುನಾವಣಾ ಪ್ರಚಾರ ಮಾಡಲಿಲ್ಲ, ಅವರು ಪ್ರಗತಿಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ 'ಕೋಮುವಾದ ಅಳಿಸಿ ಸಂವಿಧಾನ ಉಳಿಸಿ' ಎಂಬ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಷ್ಟೇ ಭಾಗವಹಿಸಿದ್ದರು. ಅದನ್ನೇ ನೆಪ ಮಾಡಿಕೊಂಡು ಕೇಂದ್ರದ ಬಿಜೆಪಿ ಸರಕಾರ ಒತ್ತಡ ತಂದು ಈ ಇಬ್ಬರನ್ನು ಅಮಾನತ್ತುಗೊಳಿಸುವ ಮೂಲಕ ಪ್ರಗತಿಪರರ ದಲಿತರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಗತಿಪರರು ಸೇರಿದಂತೆ ದಲಿತರ ಮೇಲೆ ನಿರಂತರ ದೌರ್ಜನ್ಯ ದಬಾಳಿಕೆ ನಡೆಯುತ್ತಿದೆ. ಕೋಮುವಾದಿಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ರಿರುವ ಜವಾಬ್ದಾರಿಯುತ ಪ್ರಾಜ್ಞಾವಂತ ಪ್ರಾಧ್ಯಪಕರುಗಳು ಯಾವುದೇ ತಪ್ಪನ್ನು ಮಾಡದೆ ಕಳೆದ 4 ವರ್ಷಗಳಿಂದ ಸುದ್ಧಿಯಾಗುತ್ತಲೆ ಬಂದಿದ್ದಾರೆ. ಅದರ ಮುಂದುವರೆದ ಭಾಗ ಕರ್ನಾಟಕದಲ್ಲಿ ಈ ಇಬ್ಬರು ಪ್ರಾಧ್ಯಾಪಕರ ಮೇಲೆ ನಡೆದಿದೆ. ದಲಿತರು ಹಿಂದುಳಿದವರು ಪುರೋಹಿತಶಾಹಿಗಳ ಗುಲಾಮರಾಗಿ ಬದುಕಬೇಕು ಎಂಬ ಧೋರಣೆಯನ್ನು ಹೊಂದಿದೆ ಎಂದು ದೂರಿದರು.

ಇಬ್ಬರು ವಿ.ವಿ. ಪ್ರಧ್ಯಾಪಕರ ಅಮಾನತ್ತು ಕಾನೂನು ಬಾಹಿರ, ವೈದಿಕ, ಪುರೋಹಿತಶಾಹಿ ವಿಕೃತ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಸಿಲುಕಿದೆ. ಸರ್ವಾಧಿಕಾರಿ ಧೋರಣೆ ಜೊತೆಗೆ ದಲಿತ ಬುದ್ಧಿಜೀವಿಗಳಿಗೆ ಅವಮಾನ ಮಾಡುವ ಮೂಲಕ ಸಾಮಾಜಿಕ, ಸಾಮರಸ್ಯಕ್ಕೆ ಧಕ್ಕೆ ತಂದಿರುವುದು ಖಂಡನಾರ್ಹ ಎಂದು ಹೇಳಿದರು.

ಭಾರತ ಕೋಮುವಾದಿ ಮತ್ತು ಜಾತಿವಾದಿಗಳ ರಾಜಕೀಯಕ್ಕೆ ಸಿಲುಕಿ ನರಳುತ್ತಿದೆ. ಅಂತಹವರ ವಿರುದ್ಧ ಜವಾಬ್ದಾರಿಯುತ ನಾಗರೀಕರಾಗಿ ಮತ್ತು ಪ್ರಜ್ಞಾಪೂರ್ವಕರಾಗಿ ಸತ್ಯವನ್ನು ಭಾರತೀಯ ಸಂವಿಧಾನದ ಪರಿಚ್ಛೇದ 19.1(ಚಿ) ಅಡಿಯಲ್ಲಿ ಮಂಡಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಚುನಾವಣಾ ಆಯೋಗದ ದೂರಿನ ಮೇರೆಗೆ ಈ ಇಬ್ಬರು ಪ್ರಧ್ಯಾಪಕರುಗಳನ್ನು ವಿಚಾರಣೆಗೊಳಪಡಿಸದೆ ಏಕಾಏಕಿ ಅಮಾತ್ತುಗೊಳಿಸಿರುವುದು ಮತೀಯ ಮತ್ತು ರಾಜಕೀಯ ಪ್ರೇರಿತದಿಂದ ಕೂಡಿದೆ ಎಂದು ಹೇಳಿದರು.

ಜಾಗೃತಿ ಕಾರ್ಯಕ್ರಮದಲ್ಲಿ ಪ್ರೊ. ಅರವಿಂದ ಮಾಲಗತ್ತಿ, ಪ್ರೊ. ಮಹೇಶ್‍ಚಂದ್ರಗುರು ಅವರಲ್ಲದೆ, ಹಿರಿಯ ಸಾಹಿತಿಗಳಾದ ಡಾ.ಕೆ.ಮರುಳಸಿದ್ಧಪ್ಪ, ಪ್ರೊ.ಕೆ.ಎಸ್. ಭಗವಾನ್, ಪ್ರಗತಿಪರ ಚಿಂತಕ ಪ. ಮಲ್ಲೇಶ್, ಪ್ರೊ. ಶಿವರಾಜ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ  ಮೊದಲಾದವರೆಲ್ಲ ಪಾಲ್ಗೊಂಡಿದ್ದರು. ಅದು ಯಾವ ಪಕ್ಷದ ವಿರುದ್ಧದ ಅಥವಾ ಯಾವ ಪಕ್ಷದ ಪರವಾದ ಕಾರ್ಯಕ್ರಮವೂ ಆಗಿರದೇ ಕೇವಲ ಕೋಮುವಾದ ವಿರೋಧಿಸಿ, ಜಾತ್ಯತೀತತೆ ಬೆಂಬಲಿಸಿ ಎಂಬ ಸಂದೇಶ ನೀಡುವಂತದ್ದು ಮಾತ್ರ ಆಗಿತ್ತು ಎಂದು ಹೇಳಿದರು.

ಅದರಲ್ಲಿ ಅರವಿಂದ ಮಾಲಗತ್ತಿ ಅವರಾಗಲೀ, ಮಹೇಶ್‍ಚಂದ್ರಗುರು ಅವರಾಗಲೀ ಯಾವ ಪಕ್ಷಕ್ಕೂ ಮತ ನೀಡಿರೆಂದು ಕೋರಲಿಲ್ಲ. ಹೀಗಿರುವಾಗ ಚುನಾವಣಾಧಿಕಾರಿಗಳು ನೀಡಿದ ಸೂಚನೆ ಆಧರಿಸಿ ಅವರ ವಿರುದ್ಧ ಕ್ರಮ ಸರಿಯಲ್ಲ ಎಂದು ತಿಳಿಸಿದರು.

ಜೊತೆಗೆ, ಸೂಕ್ತ ರೀತಿ ತನಿಖೆ ನಡೆದು, ಇವರಿಬ್ಬರಿಂದ ಹೇಳಿಕೆ ಪಡೆದು, ಕೂಲಂಕಶ ಪರಿಶೀಲನೆ ನಡೆದು ತಪ್ಪಿತಸ್ಥರೆಂದು ಸಾಬೀತಾದ ಬಳಿಕವಷ್ಟೇ ಕ್ರಮ ಕೈಗೊಳ್ಳಬೇಕಾಗಿತ್ತು. ವಿವಿಯ ಸಿಂಡಿಕೇಟನ್ನೂ ಈ ವಿಷಯದಲ್ಲಿ ನಿರ್ಲಕ್ಷಿಸಲಾಗಿದೆ ಎಂದರು.

ಈ ಇಬ್ಬರ ಅಮಾನತ್ತು ಆದೇಶವನ್ನು ಮೈಸೂರು ವಿಶ್ವವಿದ್ಯಾನಿಲಯ  ಹಿಂಪಡೆಯದಿದ್ದಲ್ಲಿ, ದಲಿತ, ಹಿಂದುಳಿದವರ್ಗಗಳ ಸಮೂಹ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡುವುದು ಶತಸಿದ್ಧ ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ. ಆಚಾರ್ಯ, ಮಲ್ಲೇಶ್ ಚುಂಚನಹಳ್ಳಿ, ಕೆ.ಆರ್. ಗೋಪಾಲಕೃಷ್ಣ, ಡಾ. ಶ್ರೀನಿವಾಸ್, ಚಂದ್ರಾಚಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News