ಆಡಳಿತದ ವೈಫಲ್ಯ ಖಂಡಿಸಿ ಪ್ರತಿಭಟನೆ ನಡೆಸಿದವರಿಗೆ “ನಿಮ್ಮ ನಾಟಕ ನಿಲ್ಲಿಸಿ” ಎಂದ ಆದಿತ್ಯನಾಥ್

Update: 2018-04-26 13:21 GMT

ಗೋರಖ್ ಪುರ, ಎ.26: ರೈಲೊಂದು ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ 13 ಮಕ್ಕಳು ಮೃತಪಟ್ಟ ಘಟನೆ ಇಲ್ಲಿನ ಖುಷಿನಗರ್ ನಲ್ಲಿ ನಡೆದಿತ್ತು. ಈ ಸಂದರ್ಭ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕಾಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, “ನಿಮ್ಮ ನಾಟಕ ನಿಲ್ಲಿಸಿ” ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

ಮೃತಪಟ್ಟವರಲ್ಲಿ ಹೆಚ್ಚಿನವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇಲ್ಲಿನ ಡಿವೈನ್ ಪಬ್ಲಿಕ್ ಸ್ಕೂಲ್ ಬಸ್ಸೊಂದು ರೈಲ್ವೆ ಕ್ರಾಸಿಂಗ್ ನಿಂದ ಸಾಗುತ್ತಿದ್ದಾಗ ರೈಲು ಢಿಕ್ಕಿ ಹೊಡೆದಿತ್ತು. ಗೇಟು ನಿರ್ಮಿಸದ ರೈಲ್ವೆ ಇಲಾಖೆ ಹಾಗು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾವಿರಾರು ಮಂದಿ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಈ ಸಂದರ್ಭ ಸ್ಥಳಕ್ಕಾಗಮಿಸಿದ ಮುಖ್ಯಮಂತ್ರಿ ಆದಿತ್ಯನಾಥ್, “ನಿಮ್ಮ ಘೋಷಣೆಯನ್ನು ನಿಲ್ಲಿಸಿ… ನಾನು ನಿಮಗೆ ಹೇಳುತ್ತಿದ್ದೇನೆ…. ನಾನು ಹೇಳುತ್ತಿದ್ದೇನೆ” ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ಪ್ರತಿಭಟನಕಾರರು ಇದಕ್ಕೆ ಕಿವಿಗೊಡಲಿಲ್ಲ. ಈ ಸಂದರ್ಭ ಪ್ರತಿಭಟನಕಾರರ ವಿರುದ್ಧ ಕೋಪಗೊಂಡ ಆದಿತ್ಯನಾಥ್,”ನಿಮ್ಮ ನಾಟಕವನ್ನು ನಿಲ್ಲಿಸಿ” ಎಂದರು.

ಆದಿತ್ಯನಾಥ್ ನೀಡಿರುವ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಕ್ಕಳನನ್ನು ಕಳೆದುಕೊಳ್ಳಲು ಕಾರಣವಾಗಿದ್ದ ಆಡಳಿತದ, ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದರೆ, ಆ ಪ್ರತಿಭಟನೆಯನ್ನು ‘ನಾಟಕ’ ಎಂದ ಆದಿತ್ಯನಾಥ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News