ರಾಜ್ಯದ ಚುನಾವಣೆ ರಾಷ್ಟ್ರ ರಾಜಕಾರಣದ ದಿಕ್ಸೂಚಿ: ಜೈರಾಂ ರಮೇಶ್

Update: 2018-04-26 13:43 GMT

ಚಿಕ್ಕಮಗಳೂರು, ಎ.26: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 5 ವರ್ಷಗಳ ಅಧಿಕಾರವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದ್ದು, ಈ ಚುನಾವಣೆಯ ಫಲಿತಾಂಶವು ಭವಿಷ್ಯದಲ್ಲಿ ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಲಿದೆ ಎಂದು ಮಾಜಿ ಕೇಂದ್ರ ಅರಣ್ಯ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅಭಿಪ್ರಾಯಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್‍ಪುರ ಸೇರಿದಂತೆ, ಬಿಹಾರ, ರಾಜಸ್ತಾನ ಮತ್ತಿತರ ರಾಜ್ಯಗಳಲ್ಲಿ ಸಂಸದೀಯ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಗುಜಾರಾತ್‍ನ ವಿಧಾನಸಭೆ ಚುನಾವಣೆ ವೇಳೆ 150 ಸ್ಥಾನ ಪಡೆಯುವುದಾಗಿ ಹೇಳಿದ್ದ ಬಿಜೆಪಿ ಮುಖಂಡರ ಹೇಳಿಕೆ ಹುಸಿಯಾಗಿದೆ. ಅಲ್ಲಿ ಬಿಜೆಪಿಯೇ ಸರಕಾರ ರಚಿಸಿದ್ದರೂ ನೈತಿಕವಾಗಿ ಬಿಜೆಪಿ ಸೋಲುಕಂಡಿದೆ. ಪ್ರಸಕ್ತ ಕಾರ್ನಾಟಕದ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಇಲ್ಲೂ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸಲಿದ್ದು, ಈ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣ ಮೇಲೆ ಅಪಾರ ಪರಿಣಾಮ ಬೀರಲಿದ್ದು, ಕೇಂದ್ರದಲ್ಲಿನ ಬಿಜೆಪಿ ಸರಕಾರಕ್ಕೂ ಮುಂದೆ ಸೋಲಾಗಲಿದೆ ಎಂದರು.

1978ರಲ್ಲಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಸಂಜೀವಿನಿಯಂತಾಗಿತ್ತು. ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ಎರಡನೆ ಬಾರಿಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‍ಗೆ ಸಂಜೀವಿನಿ ಈ ಫಲಿತಾಂಶ ಸಂಜೀವಿನಿಯಾಗಲಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಆಡಳಿತಕ್ಕೆ ದೇಶಾದ್ಯಂತ ಜನಾಕ್ರೋಶ ವ್ಯಕ್ತವಾಗಿದ್ದು, ಎನ್‍ಡಿಎ ಮೈತ್ರಿ ಪಕ್ಷಗಳಾದ ಟಿಡಿಪಿ ಈಗಾಗಲೇ ಬಿಜೆಪಿಯ ಸಖ್ಯವನ್ನು ಧಿಕ್ಕರಿಸಿ ಹೊರಬಂದಿದೆ. ಇನ್ನು ಅಕಾಲಿದಳ, ಶಿವಸೇನೆ ಎನ್‍ಡಿಯ ಕೂಟದೊಂದಿಗೆ ಗುರುತಿಸಿಕೊಂಡಿದ್ದರೂ ಆ ಪಕ್ಷಗಳಿಗೆ ಬಿಜೆಪಿ ಆಡಳಿತದ ಬಗ್ಗೆ ಅಸಮಾದಾನವಿದೆ. ಕರ್ನಾಟಕದ ಚುನಾವಣೆಯ ಬಳಿಕ ಈ ಪಕ್ಷಗಳೂ ಎನ್‍ಡಿಎ ಮೈತ್ರಿಕೂಟದಿಂದ ಹೊರಬರಲಿವೆ. ಆಗ ಬಿಜೆಪಿಗೆ ಯಾವ ಪಕ್ಷಗಳ ಬೆಂಬಲವೂ ಸಿಗುವುದಿಲ್ಲ. ಈ ಕಾರಣಕ್ಕೆ ರಾಜ್ಯದ ಚುನಾವಣೆಯ ಮೇಲೆ ಇಡೀ ದೇಶ ತಿರುಗಿ ನೋಡುತ್ತಿದೆ ಎಂದು ಜೈರಾಮ್ ರಮೇಶ್ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಸಿಟಿ ರವಿ ಶಾಸಕರಾಗಿದ್ದಾರೆ. ಬಿಜೆಪಿ ಸರಕಾರದಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಮಂತ್ರಿಗಳಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋ.ರೂ. ಅನುದಾನ ತಂದಿರುವುದಾಗಿ ಹೇಳುವ ಅವರು, ಆ ಅನುದಾನವನ್ನು ಅಲ್ಲಿ ಬಳಕೆ ಮಾಡಿದ್ದಾರೆಂಬುದು ತಿಳಿಯುತ್ತಿಲ್ಲ. ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರೂ ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳಿಗೆ ಕಾಳಜಿ ವಹಿಸಿಲ್ಲ. ಜಿಲ್ಲೆ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಸಮಾಜದ ಧ್ರುವೀಕರಣದ ಆವಶ್ಯಕತೆ ಇಲ್ಲ. ನಮ್ಮದು ಬಹುಧರ್ಮದ ಸಮಾಜ, ಎಲ್ಲ ಧರ್ಮಗಳೂ ಒಂದೇ ಎನ್ನು ಜಾತ್ಯತೀತ ತತ್ವದಲ್ಲಿ ಕಾಂಗ್ರೆಸ್ ನಂಬಿಕೆ ಇರಿಸಿದೆ. ಸಿದ್ಧಾಂತದ ಮೇಲೆಯೇ ಕಾಂಗ್ರೆಸ್ ಇದುವರೆಗೂ ಆಡಳಿತ ನಡೆಸಿದೆ. ರಾಜ್ಯದಲ್ಲೂ ಇದೇ ತತ್ವಗಳ ಆಧಾರದ ಮೇಲೆ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುವ ಮೂಲಕ ಎಲ್ಲ ಸಮುದಾಯದವರಿಗೂ ಸಾಮಾಜಿಕ ನ್ಯಾಯ ನೀಡಿದ್ದಾರೆಂದ ಅವರು, ತಾನು ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ಅರಣ್ಯ ಸಚಿವನಾಗಿದ್ದಾಗ ಕುದುರೆಮುಖ ಹುಲಿ ಯೋಜನೆಯಡಿಯಲ್ಲಿ ಅಲ್ಲಿಯ ಜನರನ್ನು ಒತ್ತಾಯಪೂರ್ವಕವಾಗಿ ಒಕ್ಕಲೇಬ್ಬಿಸಿಲ್ಲ. ಸ್ವಇಚ್ಚೆಯಿಂದ ಅಲ್ಲಿಂದ ಹರ ಬಂದವರಿಗೆ ಪರಿಹಾರ ನೀಡಲಾಗಿದೆ. ಅರಣ್ಯ ಭೂಮಿಯನ್ನು ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡುವ ಕೇಂದ್ರ ಸರಕಾರದ ಯೋಜನೆಗೆ ಕಾಂಗ್ರೆಸ್ ಪಕ್ಷ ಹಾಗೂ ತಮ್ಮ ಬಲವಾದ ವಿರೋಧವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್, ಎಐಸಿಸಿ ಸದಸ್ಯ ಸಂದೀಪ್, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನಿಗೆ ಪಿಎಂ ಖುರ್ಚಿ ಹೋಗುವ ಭಯ ಕಾಡುತ್ತಿದೆ:ಪ್ರಧಾನಿ ಮೋದಿ ಅವರಿಗೆ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಸೋಲುವ ಬಗ್ಗೆ ಭಯ ಆರಂಭವಾಗಿದೆ. ಈ ಕಾರಣಕ್ಕೆ ಅವರು ಪದೇಪದೇ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋಲು ಪ್ರಧಾನಿ ಅವರ ಸೋಲಾಗಲಿದೆ, ಮೋದಿ ಅವರ ಪ್ರಧಾನಿ ಪದವಿಗೆ ಕುತ್ತು ಬರಲಿದೆ. ರಾಜ್ಯದ ಚುನಾವಣೆ ಸಿಎಂ ಪದವಿಗಾಗಿ ನಡೆಯುತ್ತಿದೆಯೇ ಹೊರತು ಪಿಎಂ ಸ್ಥಾನಕ್ಕಾಗಿ ಆಲ್ಲ, ಇದರ ಅರಿವಿದ್ದರೂ ಪ್ರಧಾನಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪದೇ ಪದೇ ಇಲ್ಲಿಗೆ ಬರುತ್ತಿರುವುದರ ಹಿಂದೆ ಮೋದಿ ಅವರಿಗೆ ತಮ್ಮ ಪ್ರಧಾನಿ ಖುರ್ಚಿ ಹೋಗುವ ಭೀತಿ ಆರಂಭವಾಗಿದೆ ಎಂದು ವ್ಯಂಗ್ಯವಾಡಿದ  ಜೈರಾಮ್ ರಮೇಶ್, ಆದಿತ್ಯನಾಥ್‍ಗೆ ಗೊತ್ತಿರುವುದು ಧಾರ್ಮಿಕ ವಿಷಯಗಳ ಆಧಾರದ ಮೇಲೆ ಸಮಾಜವನ್ನು ಒಡೆಯುವುದು, ಅಮಿತ್ ಶಾಗೆ ಗೊತ್ತಿರುವುದು ಸಾಮಾಜಿಕ ಧ್ರುವೀಕರಣ ಮಾತ್ರ ಎಂದು ಟೀಕಿಸಿದರು.

ಭಷ್ಟಾಚಾರದಲ್ಲಿ ಗೋಲ್ಡ್ ಮೆಡಲ್ ಕೊಡುವುದಾದರೆ ಅದನ್ನು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೊಡಬೇಕು. ಸಿಲ್ವರ್ ಮೆಡಲ್ ಅನ್ನು ಸಿ.ಟಿ.ರವಿಗೆ ನೀಡಬೇಕೆಂದು ವ್ಯಂಗ್ಯವಾಡಿದ ಜೈರಾಮ್ ರಮೇಶ್, ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲಿಗೆ ಹೋಗಿ ಬಂದಿದ್ದಾರೆ. ಸಿಟಿ ರವಿ ಸರಕಾರದ ಅನುದಾನವನ್ನು ಲೂಟಿ ಮಾಡಿ ಕೋಟಿ ರವಿಯಾಗಿದ್ದಾರೆ. ಇನ್ನು ಅಮಿತ್‍ಶಾ ಅವರ ಪುತ್ರ ಜೈಶಾ ಪುತ್ರನಿಗೆ ಬ್ಯಾಂಕ್‍ಗಳು ಯಾವುದೇ ಭದ್ರತೆ, ಜಾಮೀನಿಲ್ಲದೇ ಸಾಲ ನೀಡುವಂತೆ ಪ್ರಧಾನಿ ನೋಡಿಕೊಂಡಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‍ವೊಂದರಿಂದ 20 ಸಾವಿರ ಕೋಟಿ ರೂ. ಸಾಲವನ್ನು ಜಿಎಸ್‍ಪಿಸಿ ಎಂಬ ಕಂಪೆನಿಗೆ ಕೊಡಿಸಿದ್ದಾರೆ. ಈ ಕಂಪೆನಿ ಇದುವರೆಗೂ ನಯಾ ಪೈಸೆಯನ್ನೂ ಬ್ಯಾಂಕ್‍ಗೆ ಮರುಪಾವತಿಸಿಲ್ಲ. ಇದು ಮೋದಿ ಸಿಎಂ ಆಗಿದ್ದಾಗ ನಡೆದ ಅತೀ ದೊಡ್ಡ ಹಗರಣವಾಗಿದೆ. ಹೀಗೆ ಸಾಲು ಸಾಲು ಭ್ರಷ್ಟಾಚಾರ ಮಾಡಿರುವ ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News