ಪ್ರಧಾನಿ ಮೋದಿ, ಬಿಎಸ್‌ವೈ ವಿರುದ್ಧ ಆಯೋಗಕ್ಕೆ ದೂರು

Update: 2018-04-26 15:31 GMT

ಬೆಂಗಳೂರು, ಎ.26: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಬಿಜೆಪಿ ಪಕ್ಷ ಪತ್ರಿಕೆ, ಸುದ್ದಿ ವಾಹಿನಿಗಳಿಗೆ ದಿನನಿತ್ಯ ಸುಳ್ಳು ಜಾಹೀರಾತು ನೀಡಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಗುರುವಾರ ಸಂಜೆ ಶೇಷಾದ್ರಿ ರಸ್ತೆಯ ರಾಜ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದ ಕಾಂಗ್ರೆಸ್ ಮುಖಂಡರಾದ ಪ್ರೊ.ರಾಜೀವ್ ಗೌಡ, ವಿ.ಎಸ್.ಉಗ್ರಪ್ಪ, ಸೂರಜ್ ಹೆಗಡೆ ಸೇರಿದಂತೆ ಪ್ರಮುಖರು, ಬಿಜೆಪಿ ಪಕ್ಷದ ಚುನಾವಣಾ ಜಾಹೀರಾತುಗಳಲ್ಲಿ ಹಸಿ ಸುಳ್ಳು ಇದ್ದು, ಸಂಪೂರ್ಣವಾಗಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ದೂರು ಸಲ್ಲಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ, ಬಿಜೆಪಿ ಪಕ್ಷದ ಅಧಿಕೃತ ಜಾಹೀರಾತುಗಳಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿಸಿದರು.

ಜಾಹೀರಾತು ನೀಡುವ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ, ಕಾನೂನು ರೀತ್ಯ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದ ಅವರು, ಇದರ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದನ್ವಯ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ದುಬಾರಿ ವೆಚ್ಚದಲ್ಲಿ ಜಾಹೀರಾತಿಗೆ ನೀಡಿರುವ ಹಣದ ಬಗ್ಗೆ ಐಟಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪಕ್ಷದ ವಿರುದ್ಧ ಕಾನೂನು ಕ್ರಮವನ್ನು ರಾಜ್ಯ ಚುನಾವಣೆ ಆಯೋಗ ಈ ಕೂಡಲೇ ಕೈಗೊಳ್ಳಬೇಕು. ಒಂದು ವೇಳೆ, ಕೇಂದ್ರ ಸರಕಾರದ ಒತ್ತಡ ಇರುವ ತಂತ್ರ ಅನುಸರಿಸಿದರೆ, ಹೋರಾಟ ಮಾಡಬೇಕಾಗುತ್ತದೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದರು.

ದುಬಾರಿ ವೆಚ್ಚದಲ್ಲಿ ಜಾಹೀರಾತಿಗೆ ನೀಡುತ್ತಿರುವ ಬಗ್ಗೆ ಬಿಜೆಪಿ ಪಕ್ಷದ ಮುಖಂಡರ ವಿರುದ್ಧ ಆದಾಯ ತೆರಿಗೆ (ಐಟಿ) ತನಿಖೆಯಾಗಬೇಕು’
-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News