ಪಾರದರ್ಶಕ ವಿಚಾರಣೆ ನಿಜವಾದ ಕಾಳಜಿ: ಸುಪ್ರೀಂ ಕೋರ್ಟ್

Update: 2018-04-26 15:52 GMT

ಹೊಸದಿಲ್ಲಿ, ಎ. 26: ಕಥುವಾ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಜಮ್ಮುವಿನಿಂದ ವರ್ಗಾಯಿಸುವ ಸಾಧ್ಯತೆ ಬಗ್ಗೆ ಗುರುವಾರ ಸೂಚನೆ ನೀಡಿರುವ ಸರ್ವೋಚ್ಚ ನ್ಯಾಯಾಲಯ, ಇದರ ಹಿಂದಿರುವ ನಿಜವಾದ ಕಾಳಜಿ ಪಾರದರ್ಶಕ ವಿಚಾರಣೆ ಎಂದಿದೆ. ಪಾರದರ್ಶಕ ವಿಚಾರಣೆಯ ಕೊರತೆಯ ಸಣ್ಣದೊಂದು ಸಾಧ್ಯತೆ ಕಂಡು ಬಂದರೂ ಈ ಪ್ರಕರಣವನ್ನು ಕಥುವಾದಿಂದ ವರ್ಗಾಯಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಕಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಕೂಡ ಒಳಗೊಂಡಿರುವ ಪೀಠ, ಪಾರದರ್ಶಕ ವಿಚಾರಣೆ ಕೇವಲ ಆರೋಪಿಗಳ ಬಗ್ಗೆ ಮಾತ್ರವಲ್ಲ ಸಂತ್ರಸ್ತೆಯ ಕುಟುಂಬವನ್ನೂ ಒಳಗೊಂಡಿರಲಿದೆ. ಸಂತ್ರಸ್ತೆಯ ಪರವಾದ ವಕೀಲರಿಗೆ ರಕ್ಷಣೆ ನೀಡುವುದನ್ನು ಕೂಡ ಇದು ಒಳಗೊಂಡಿದೆ ಎಂದಿದೆ. ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯ, ಈ ಪ್ರಕರಣದ ಪಾರದರ್ಶಕ ತನಿಖೆ ಈ ವಿಷಯದಲ್ಲಿರುವ ನಿಜವಾದ ಸಮಸ್ಯೆಗಳನ್ನು ಕೂಡ ಒಳಗೊಂಡಿವೆ ಎಂದು ಅದು ಹೇಳಿದೆ.

ಕಥುವಾ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಕಥುವಾ ನ್ಯಾಯಾಲಯದಿಂದ ಚಂಡಿಗಢ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮನವಿಯನ್ನು ಇಬ್ಬರು ಆರೋಪಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯಲು ಪ್ರಕರಣದ ವಿಚಾರಣೆಯನ್ನು ವರ್ಗಾಯಿಸಬೇಕು ಎಂದು ಬಾಲಕಿಯ ತಂದೆ ಕೋರಿದ್ದಾರೆ. ಪ್ರಕರಣವನ್ನು ಕಥುವಾ ನ್ಯಾಯಾಲಯದಿಂದ ಹೊರಗೆ ವರ್ಗಾಯಿಸುವುದನ್ನು ವಿರೋಧಿಸಿರುವ ಆರೋಪಿಗಳಾದ ಸಾಂಜಿ ರಾಮ್ ಹಾಗೂ ವಿಶಾಲ್ ಜಗೋತ್ರಾ, ಈ ಪ್ರಕರಣದಲ್ಲಿ ನಮ್ಮನ್ನು ಸಿಲುಕಿಸಲಾಗಿದೆ ಎಂದಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ ಸಮರ್ಥನೀಯ

ಕಥುವಾ ಅತ್ಯಾಚಾರ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಲು ಜಮ್ಮು ಹಾಗೂ ಕಾಶ್ಮೀರ ನ್ಯಾಯವಾದಿಗಳು ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂಬ ಅವರ ಆಗ್ರಹ ಸಮರ್ಥನೀಯ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News