ಪ್ರಚಾರದ ವೇಳೆಯಲ್ಲೂ ಚಿಕಿತ್ಸೆ ನೀಡುತ್ತಿರುವ 5 ರೂ. ಡಾಕ್ಟರ್ ಶಂಕರೇಗೌಡ

Update: 2018-04-26 16:31 GMT

ಮಂಡ್ಯ, ಎ.26: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 5 ರೂ. ಖ್ಯಾತಿಯ ವೈದ್ಯ ಡಾ.ಶಂಕರೇಗೌಡ ಬಿರುಸಿನ ಪ್ರಚಾರದ ವೇಳೆಯಲ್ಲೇ ವೈದ್ಯಕೀಯ ಸೇವೆಯನ್ನೂ ಮುಂದುವರಿಸಿದ್ದಾರೆ.

ಗುರುವಾರ ಮಂಡ್ಯದ ಕುವೆಂಪುನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಪ್ರಚಾರ ನಡೆಸಿ ಮತಯಾಚಿಸಿದ ಶಂಕರೇಗೌಡ, ಈ ಸಮಯದಲ್ಲಿ ಚಿಕಿತ್ಸೆ ಪಡೆಯಲು ಬಂದ ಹಲವರಿಗೆ ವೈದ್ಯಕೀಯ ಸೇವೆಯನ್ನೂ ಒದಗಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರ ವೇಳೆ ಸಲಹೆ ಕೇಳಿ ಬರುವ ಹಲವಾರು ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದೇನೆ. ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಾಗಲು ರೋಗಿಗಳನ್ನು ನೋಡುತ್ತೇನೆ ಎಂದರು.

ಎಲ್ಲಾ ಮತದಾರರನ್ನು ಭೇಟಿ ಮಾಡಬೇಕೆಂಬ ಉದ್ದೇಶದಿಂದ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಯಾವುದೇ ಒತ್ತಡಗಳಿಗೆ ಮಣಿದು ಉಮೇದುವಾರಿಕೆ ವಾಪಸ್ಸು ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಚಾರಕ್ಕೆ ಹೋದ ಕಡೆಗಳೆಲ್ಲೆಲ್ಲಾ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಜನರ ಅಭಿಪ್ರಾಯ ಕಂಡು ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

36 ವರ್ಷದಿಂದ ವೈದ್ಯಕೀಯ ಸೇವೆ ಮಾಡುತ್ತಿದ್ದು, ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಉಪಾಧ್ಯಕ್ಷನಾಗಿ ಜನಪರ ಕೆಲಸ ಮಾಡಿದ್ದೇನೆ. ವೃತ್ತಿ ಬದುಕಿನ ಜೊತೆ ಜೊತೆಗೆ ಜನಸೇವಕನಾಗಿಯೂ ಕೆಲಸ ಮಾಡಿದ ಅನುಭವ ತಮಗಿದೆ ಎಂದು ಹೇಳಿದರು.

ಜಯಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎಸ್.ನಾರಾಯಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಲಿಂಗೇಗೌಡ, ಇತರ ಮುಖಂಡರು ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News