ಭಾರತದ ಪ್ರಥಮ ಪ್ರಧಾನಿ ಎಂದು ಮೋದಿಯ ಚಿತ್ರ ತೋರಿಸಿದ ಗೂಗಲ್ ..!

Update: 2018-04-26 17:08 GMT

ಹೊಸದಿಲ್ಲಿ, ಎ.26: ಗೂಗಲ್ ಸರ್ಚ್‌ನಲ್ಲಿ ಬುಧವಾರ ಭಾರತದ ಪ್ರಥಮ ಪ್ರಧಾನಿ ಎಂದು ಟೈಪ್ ಮಾಡಿ ಹುಡುಕಾಟ ನಡೆಸಿದವರಿಗೆ ಒಂದು ಅಚ್ಚರಿ ಕಾದಿತ್ತು. ಗೂಗಲ್ ತೋರಿಸಿದ ಚಿತ್ರ ಭಾರತದ ಹಾಲಿ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿತ್ತು. ಈ ಬಗ್ಗೆ ಓರ್ವ ವ್ಯಕ್ತಿ ಟ್ವೀಟ್ ಮಾಡಿದ್ದು, ಗೂಗಲ್ ಸರ್ಚ್‌ನಲ್ಲಿ ‘ಭಾರತದ ಪ್ರಥಮ ಪ್ರಧಾನಿ ಯಾರು’ ಎಂದು ಟೈಪ್ ಮಾಡಿದರೆ ನಿಮಗೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಬಗ್ಗೆ ಮಾಹಿತಿ ದೊರೆಯುತ್ತದೆ. ಆದರೆ ಅಲ್ಲಿರುವ ಚಿತ್ರ ಮಾತ್ರ ಹಾಲಿ ಪ್ರಧಾನಿ ನರೇಂದ್ರ ಮೋದಿಯವರದ್ದು ಎಂದು ತಿಳಿಸಿದ್ದಾರೆ.

 ಆದರೆ ಸರ್ಚ್ ಇಂಜಿನ್‌ನಲ್ಲಿರುವ ವಿಚಾರಣಾ ವಿಭಾಗದಲ್ಲಿ ‘ಇಂಡಿಯಾ ಫಸ್ಟ್ ಪಿಎಂ’ ಎಂದು ಬರೆದು ಶೋಧಿಸಿದಾಗ ಇದಕ್ಕೆ ತದ್ವಿರುದ್ಧ ಫಲಿತಾಂಶ ಲಭಿಸುತ್ತದೆ. ಇಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಚಿತ್ರ ಪ್ರಕಟಿಸಿದರೂ, ಇದಕ್ಕೆ ಅಡಿಬರಹ ಮಾತ್ರ ನರೇಂದ್ರ ಮೋದಿ ಎಂದೇ ಇದೆ. ಈ ತಪ್ಪನ್ನು ಉಲ್ಲೇಖಿಸಿ ಹಲವರು ಟ್ವೀಟ್ ಮಾಡಿದ್ದಾರೆ. ಗೂಗಲ್, ದಯವಿಟ್ಟು ಇದನ್ನು ಸರಿಪಡಿಸಿ. ನೀವು ಕೂಡಾ ಮೋದಿಯವರ ಬಲೆಗೆ ಬಿದ್ದಿದ್ದೀರಾ ಎಂದು ಓರ್ವರು ಟ್ವೀಟ್ ಮಾಡಿರುವುದು ಗಮನಾರ್ಹವಾಗಿದೆ. ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ದಿವ್ಯಸ್ಪಂದನ(ರಮ್ಯಾ) ಈ ತಪ್ಪಿನ ಬಗ್ಗೆ ಗೂಗಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪನ್ನು ಗೂಗಲ್ ತಿದ್ದಿಕೊಳ್ಳುವಷ್ಟರಲ್ಲಿ ಈ ಕುರಿತ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News