ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಲವು ತಾಂತ್ರಿಕ ದೋಷಗಳು: ಕರ್ನಾಟಕ ಡಿಜಿಪಿಗೆ ದೂರು

Update: 2018-04-26 17:18 GMT

ಹೊಸದಿಲ್ಲಿ,ಎ.26: ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ದಿಲ್ಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಮತ್ತು ಅದರ ಲ್ಯಾಂಡಿಂಗ್ ಕೂಡ ಸಾಮಾನ್ಯ ರೀತಿಯಲ್ಲಿರಲಿಲ್ಲ. ಇದರಿಂದ ಪ್ರಯಾಣಿಕರು ಜೀವಭಯ ಎದುರಿಸುವಂತಾಗಿತ್ತು ಎಂದು ದೂರಿ ಕಾಂಗ್ರೆಸ್ ಕರ್ನಾಟಕದ ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ದೂರು ಸಲ್ಲಿಸಿದೆ.

ಬೆಳಗಿನ ಎರಡು ಗಂಟೆಗಳ ಪ್ರಯಾಣದ ಅವಧಿಯಲ್ಲಿ ಹಲವಾರು ವಿವರಿಸಲಾಗದ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು ಎಂದು ದೂರಿನಲ್ಲಿ ತಿಳಿಸಿರುವ ರಾಹುಲ್ ಅವರ ಕಚೇರಿಯು, ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಮಧ್ಯಾಹ್ನ ರಾಹುಲ್ ಗಾಂಧಿಯವರಿಗೆ ದೂರವಾಣಿ ಕರೆ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು ಎಂದು ಕಾಂಗ್ರೆಸ್‌ನಲ್ಲಿಯ ಮೂಲಗಳು ತಿಳಿಸಿದವು. ಈ ಪೊಲೀಸ್ ದೂರು ಮುಂದಿನ ತನಿಖೆಗಾಗಿ ನಾಗರಿಕ ವಾಯುಯಾನ ಮಹಾ ನಿರ್ದೇಶಕರಿಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ವಿಮಾನದಲ್ಲಿ ‘ಸಂಭಾವ್ಯ ಮತ್ತು ಉದ್ದೇಶಪೂರ್ವಕ ಹಸ್ತಕ್ಷೇಪ’ದ ವಿಷಯವನ್ನು ಪ್ರಸ್ತಾಪಿಸಿರುವ ದೂರಿನಲ್ಲಿ, ವಿಮಾನವು ತೀವ್ರವಾಗಿ ಕುಲುಕಾಡುತ್ತಿತ್ತು, ಒಂದು ಬದಿಗೆ ವಾಲಿತ್ತು, ಎತ್ತರವನ್ನು ತೀವ್ರವಾಗಿ ಕಳೆದುಕೊಂಡಿತ್ತು ಮತ್ತು ಪ್ರಯಾಣದುದ್ದಕ್ಕೂ ಭಾರೀ ಶಬ್ದವನ್ನುಂಟು ಮಾಡುತ್ತಿತ್ತು. ವಿಮಾನದಲ್ಲಿಯ ಆಟೋಪೈಲಟ್ ವ್ಯವಸ್ಥೆ ಕೂಡ ಕೆಲಸ ಮಾಡುತ್ತಿರಲಿಲ್ಲ. ವಿಮಾನದಲ್ಲಿ ರಾಹುಲ್ ಜೊತೆಗೆ ಇನ್ನೂ ಮೂವರು ಪ್ರಯಾಣಿಕರಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೂರನೇ ಪ್ರಯತ್ನದಲ್ಲಷ್ಟೇ ವಿಮಾನವು ಕೆಳಗಿಳಿಯಲು ಸಾಧ್ಯವಾಗಿತ್ತು ಮತ್ತು ಹಾಗೆ ಮಾಡುವಾಗ ತೀವ್ರವಾಗಿ ಕಂಪಿಸಿತ್ತು ಎಂದು ತಿಳಿಸಲಾಗಿದೆ.

ಹೊರಗಿನ ವಾತಾವರಣ ಶುಭ್ರ ಮತ್ತು ಸಾಮಾನ್ಯವಾಗಿತ್ತು. ಪ್ರತಿಕೂಲ ಗಾಳಿಯೂ ಇರಲಿಲ್ಲ ಎಂದೂ ದೂರು ಬೆಟ್ಟು ಮಾಡಿದೆ. ಪ್ರಯಾಣವು ಆತಂಕದಿಂದ ಕೂಡಿದ್ದು, ಒಳಗಿದ್ದವರಿಗೆ ಜೀವ ಬೆದರಿಕೆಯನ್ನುಂಟು ಮಾಡಿತ್ತು. ವಿಮಾನದ ಚಾಲಕರೂ ಯಾನವು ಆತಂಕವನ್ನು ಸೃಷ್ಟಿಸಿತ್ತು ಎಂದು ಒಪ್ಪಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಖಾಸಗಿ ವಿಮಾನದ ಪೈಲಟ್ ಮತ್ತು ಸಿಬ್ಬಂದಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ರಾಹುಲ್ ಬಳಿಕ ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದರು. ವಿಮಾನದಲ್ಲಿ ಉದ್ದೇಶಪೂರ್ವಕ ಹಸ್ತಕ್ಷೇಪದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಮತ್ತು ಈ ಬಗ್ಗೆ ತನಿಖೆ ಅತ್ಯಗತ್ಯವಾಗಿದೆ ಎಂದು ರಾಹುಲ್ ಅವರ ಕಚೇರಿಯು ಹೇಳಿದೆ. ತನಿಖೆಯು ಪೂರ್ಣಗೊಳ್ಳುವವರೆಗೆ ವಿಮಾನವು ಹುಬ್ಬಳ್ಳಿ ನಿಲ್ದಾಣದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದೂ ಅದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News