ದೇಶವನ್ನು ವಿಭಜಿಸಲು ಆರೆಸ್ಸೆಸ್ ಮತ್ತು ಬಿಜೆಪಿ ಸಂಚು ರೂಪಿಸಿದೆ : ರಾಹುಲ್ ಗಾಂಧಿ

Update: 2018-04-26 17:20 GMT

ಹೊನ್ನಾವರ,ಎ.26: ದೇಶವನ್ನು ವಿಭಜಿಸಲು ಆರೆಸ್ಸೆಸ್ ಮತ್ತು ಬಿಜೆಪಿ ಸಂಚು ರೂಪಿಸಿದೆ. ದೇಶದ ಪ್ರಗತಿ ಮತ್ತು ಶಾಂತಿಗಾಗಿ ಕಾಂಗ್ರಸ್‍ನ್ನು ಬೆಂಬಲಿಸಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ವಿಶೇಷ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಅವರು ಪಟ್ಟಣದ ಶರಾವತಿ ಸರ್ಕಲ್‍ನಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿಯವರು ಕೇವಲ ಭರವಸೆಯಲ್ಲೇ ಆಡಳಿತ ನಡೆಸಿದ್ದಾರೆ. ಬಿಜೆಪಿಯವರಿಗೆ ದೇಶದ ಪ್ರಗತಿ, ಶಾಂತಿ ಬೇಕಿಲ್ಲ. ನಮ್ಮ ದೇಶದ ಜನರ ಹಣವನ್ನು ಕೊಳ್ಳೆ ಹೊಡೆದ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಬಗ್ಗೆ ಮೋದಿ ಅವರು ಒಂದೇ ಒಂದು ಮಾತನಾಡುವುದಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಸುಳ್ಳಿನ ಸರ್ಕಾರ. ಬಸವಣ್ಣ ನುಡಿದಂತೆ ನಡೆಯುವ ನಮ್ಮ ಸರ್ಕಾರ ರಾಜ್ಯದಲ್ಲಿ ಅನೇಕ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದೆ. ಉತ್ತಮ ಯೋಜನೆಗಳನ್ನು ರೂಪಿಸಲು, ಜನತೆಗೆ ಉಪಯುಕ್ತವಾದ ಕೆಲಸ ಮಾಡಲು, ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಕಾಂಗ್ರೆಸ್ ಬೆಂಬಲಿಸಿ ಎಂದು ಕರೆ ನೀಡಿದರು. 

ಹೊನ್ನಾವರದಲ್ಲಿ ರಾಹುಲ್ ಗಾಂಧಿ ಭಾಷಣದ ನಡುವೆ ಸೇರಿದ್ದ ಸಾರ್ವಜನಿಕರ ಮಧ್ಯೆ 'ಮೋದಿ ಮೋದಿ' ಎಂಬ ಕೂಗು ಕೇಳಿ ಬಂತು. ಅದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಕಾರ್ಯಕರ್ತರು 'ರಾಹುಲ್, ರಾಹುಲ್' ಎಂದು ಘೋಷಣೆ ಕೂಗಿದರು. ಕೆಲ ಸಮಯ ಗೊಂದಲದ ಗೂಡಾದಾಗ ಪೊಲೀಸರು ಬಂದು ತಿಳಿಗೊಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಕೆ.ಸಿ. ವೇಣುಗೋಪಾಲ, ಆರ್ ವಿ ದೇಶಪಾಂಡೆ, ಸ್ಥಳಿಯ ಶಾಸಕಿ ಶಾರದಾ ಶೆಟ್ಟಿ ಉಪಸ್ಥಿತರಿದ್ದರು. ಸಾವಿರಾರು ಸಾರ್ವಜನಿಕರು ಸೇರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News