ಶಿವಮೊಗ್ಗ ನಗರದಲ್ಲಿ ಸುಡು ಬಿಸಿಲು : 40 ಡಿಗ್ರಿ ಸೆಲ್ಸಿಯಸ್ ತಲುಪಿದ ತಾಪಮಾನ!

Update: 2018-04-26 17:35 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಎ. 26: ರಾಜ್ಯದಲ್ಲಿ 'ಮಲೆನಾಡ ನಗರಿ' ಎಂದೇ ಖ್ಯಾತವಾಗಿರುವ ಶಿವಮೊಗ್ಗ ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗಲಾರಂಭಿಸಿದೆ. ರಣ ಬಿಸಿಲಿನ ಹೊಡೆತಕ್ಕೆ ಅಕ್ಷರಶಃ ನಾಗರೀಕರು ತತ್ತರಿಸಿ ಹೋಗುತ್ತಿದ್ದಾರೆ. ರಣ ಬಿಸಿಲಿಗೆ ಕುಖ್ಯಾತಿಯಾದ ಬಯಲು ಸೀಮೆ ಪ್ರದೇಶಗಳ ರೀತಿಯಲ್ಲಿ ತಾಪಮಾನ ದಾಖಲಾಗುತ್ತಿರುವುದು, ನಾಗರಿಕರ ನಿದ್ದೆಗೆಡಿಸಿದೆ!

ಹವಮಾನ ಇಲಾಖೆಯ ಮೂಲಗಳು ನೀಡುವ ಮಾಹಿತಿ ಪ್ರಕಾರ, ಗುರುವಾರ ಶಿವಮೊಗ್ಗ ನಗರದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಬುಧವಾರ 38 ಡಿಗ್ರಿ ಸೆಲ್ಸಿಯಸ್‍ನಷ್ಟಿತ್ತು. ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯ ವೇಳೆ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡುಬಂದಿತ್ತು. ಉಳಿದಂತೆ 38, 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿಯೇ ತಾಪಮಾನ ದಾಖಲಾಗುತ್ತಿದೆ ಎಂದು ತಿಳಿಸುತ್ತವೆ. 

ಶಿವಮೊಗ್ಗ ನಗರದ ರೀತಿಯಲ್ಲಿಯೇ ಜಿಲ್ಲೆಯ ಇತರೆಡೆಯೂ ಸುಡು ಬಿಸಿಲು ಕಂಡುಬರುತ್ತಿದೆ. ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ ಮೊದಲಾದ ತಾಲೂಕುಗಳಲ್ಲಿಯೂ ಉಷ್ಣಾಂಶದ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಬಿಸಿಲ ಬೇಗೆ ಹೆಚ್ಚಾದಂತೆ ಹಲವೆಡೆ ಅಂತರ್ಜಲದ ಪ್ರಮಾಣ ಕುಸಿಯುತ್ತಿರುವ ಮಾಹಿತಿಗಳು ಕೂಡ ಕೇಳಿಬರಲಾರಂಭಿಸಿದೆ. 

'ಶಿವಮೊಗ್ಗ ನಗರದಲ್ಲಿ ಬೆಳಿಗ್ಗೆ 9 ಗಂಟೆಯಿಂದಲೇ ಬಿಸಿಲು ನೆತ್ತಿ ಸುಡಲಾರಂಭಿಸುತ್ತದೆ. ಮಧ್ಯಾಹ್ನ 1, 2 ಗಂಟೆಯ ವೇಳೆಗೆ ಸೂರ್ಯ ಬೆಂಕಿಯುಗುಳುತ್ತಿರುವ ಅನುಭವ ಉಂಟಾಗುತ್ತಿದೆ. ಡಾಂಬರು ರಸ್ತೆಗಳು ಕಾದ ಕಾವಲಿಯಂತಾಗಿರುತ್ತವೆ. ಬರಿಗಾಲಲ್ಲಿ ನಡೆಯುವುದು ಸಾಧ್ಯವಿಲ್ಲದ ಮಟ್ಟಕ್ಕೆ ಬಿಸಿಲಿಗೆ ರಸ್ತೆಗಳು ಕಾದಿರುತ್ತವೆ' ಎಂದು ವಿನೋಬನಗರದ ನಿವಾಸಿ ಮಂಜುನಾಥ್ ಎಂಬುವರು ಅಭಿಪ್ರಾಯಪಡುತ್ತಾರೆ. 

ಒಂದೆಡೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ಇನ್ನೊಂದೆಡೆ ತಂಪು ಪಾನೀಯ, ಕಲ್ಲಂಗಡಿ, ಕರಬೂಜದಂತಹ ಹಣ್ಣುಗಳಿಗೆ ಸಖತ್ ಡಿಮ್ಯಾಂಡ್ ಕಂಡುಬರುತ್ತಿದೆ. ನಗರದ ಜ್ಯೂಸ್, ಐಸ್ ಕ್ರೀಂ ಪಾರ್ಲರ್ ಗಳು, ಹಣ್ಣು ಮಾರಾಟ ಅಂಗಡಿಗಳು ಜನರಿಂದ ಕಿಕ್ಕಿರಿದು ತುಂಬುತ್ತಿರುವುದು ಸವೇಸಾಮಾನ್ಯವಾಗಿ ಕಂಡುಬರುತ್ತಿದೆ. 

'ಇತ್ತೀಚೆಗೆ ಬಿಸಿಲ ಧಗೆ ಹೆಚ್ಚಾಗಿರುವ ಕಾರಣದಿಂದ ತಂಪು ಪಾನೀಯ, ಐಸ್ ಕ್ರೀಂ ಮಾರಾಟ ಜೋರಾಗಿದೆ. ಇತರೆ ದಿನಗಳಿಗಿಂತ ಉತ್ತಮ ವ್ಯಾಪಾರವಿದೆ. ರಾತ್ರಿ 10 ಗಂಟೆಯಾದರೂ ಜನರು ಅಂಗಡಿಗೆ ಆಗಮಿಸುತ್ತಿರುತ್ತಾರೆ' ಎಂದು ನಗರದ ದುರ್ಗಿಗುಡಿ ರಸ್ತೆಯಲ್ಲಿರುವ ತಂಪು ಪಾನೀಯ ಮಾರಾಟ ಅಂಗಡಿಯೊಂದರ ಮಾಲೀಕರು ತಿಳಿಸುತ್ತಾರೆ. 

ಸಂಕಷ್ಟ: ವಯೋವೃದ್ದರು, ಮಕ್ಕಳು ಹಾಗೂ ರೋಗಿಗಳು ಸುಡು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗುತ್ತಿದ್ದಾರೆ. ಹಾಗೆಯೇ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ. ರಾತ್ರಿ ವೇಳೆ ಫ್ಯಾನ್, ಎ.ಸಿ., ಕೂಲರ್ ಇಲ್ಲದೆ ನಿದ್ರಿಸಲಾಗದ ಸ್ಥಿತಿ ಹಲವು ಬಡಾವಣೆಗಳ ನಾಗರಿಕರದ್ದಾಗಿದೆ. ಮುಂದಿನ ದಿನಗಳಲ್ಲಿ ಬಿಸಿಲ ಬೇಗೆ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳು ಗೋಚರವಾಗುತ್ತಿರುವುದು, ನಾಗರಿಕರನ್ನು ಆತಂಕಕ್ಕೆ ದೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News