ನೂತನ ಒಪ್ಪಂದಕ್ಕೆ ಫ್ರಾನ್ಸ್ ಪ್ರಸ್ತಾಪ: ಇರಾನ್, ಐರೋಪ್ಯ ಒಕ್ಕೂಟ ತಿರಸ್ಕಾರ

Update: 2018-04-26 17:45 GMT

ವಾಶಿಂಗ್ಟನ್, ಎ. 26: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆಸಿದ ಮಾತುಕತೆಯ ವೇಳೆ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮುಂದಿಟ್ಟ ‘ಇರಾನ್‌ನೊಂದಿಗೆ ನೂತನ ಒಪ್ಪಂದ’ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದೆ.

ಅದೇ ವೇಳೆ, ಐರೋಪ್ಯ ಒಕ್ಕೂಟ ದೇಶಗಳೂ ಈ ಪ್ರಸ್ತಾಪದಿಂದ ದೂರ ನಿಂತಿದ್ದು, 2015ರ ಮೂಲ ಒಪ್ಪಂದವನ್ನು ಸಮರ್ಥಿಸಿಕೊಂಡಿವೆ.

2015ರಲ್ಲಿ ‘ಜಾಯಿಂಟ್ ಕಾಂಪ್ರಿಹೆನ್ಸಿವ್ ಪ್ಲಾನ್ಸ್ ಆಫ್ ಆ್ಯಕ್ಷನ್ (ಜೆಸಿಪಿಒಎ)’ ಎಂಬ ಹೆಸರಿನ ಪರಮಾಣು ಒಪ್ಪಂದಕ್ಕೆ ಒಂದು ಕಡೆಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ರಶ್ಯ, ಜರ್ಮನಿ ಮತ್ತು ಐರೋಪ್ಯ ಒಕ್ಕೂಟ ಸಹಿ ಹಾಕಿದ್ದವು ಹಾಗೂ ಇನ್ನೊಂದೆಡೆ ಇರಾನ್ ಸಹಿ ಹಾಕಿತ್ತು. ಒಪ್ಪಂದವು 2016ರಲ್ಲಿ ಜಾರಿಗೆ ಬಂದಿತ್ತು.

ಇರಾನ್ ಒಪ್ಪಂದದ ಅನುಸಾರ ನಡೆಯುತ್ತಿದೆ ಎಂಬ ಪ್ರಮಾಣಪತ್ರಕ್ಕೆ ಅಮೆರಿಕ ಮೇ 12ರ ಒಳಗೆ ಸಹಿ ಹಾಕಬೇಕಾಗಿದೆ. ಆದರೆ, ಅದಕ್ಕೆ ಸಹಿ ಹಾಕುವುದಿಲ್ಲ ಎಂಬುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಅಂದು ಸಹಿ ಬೀಳದಿದ್ದರೆ ಒಪ್ಪಂದವು ರದ್ದಾಗುವ ಸಾಧ್ಯತೆಯಿದೆ.

ಒಪ್ಪಂದಕ್ಕೆ ಸಹಿ ಹಾಕಿದ ಇತರ ಎಲ್ಲ ಪಕ್ಷಗಳೂ ಒಪ್ಪಂದ ಮುಂದುವರಿಯಬೇಕೆಂದು ಬಯಸಿವೆ.

‘‘ನಾವು ಜೆಸಿಪಿಒಎ ಎಂಬ ಒಪ್ಪಂದವನ್ನು ಹೊಂದಿದ್ದೇವೆ. ಒಂದೋ ಅದು ಮುಂದುವರಿಯುತ್ತದೆ, ಅಥವಾ ಇಲ್ಲ’’ ಎಂದು ಟೆಹರಾನ್‌ನಲ್ಲಿ ಮಾಡಿದ ಭಾಷಣವೊಂದರಲ್ಲಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

ಐರೋಪ್ಯ ಒಕ್ಕೂಟ ಕೂಡ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದೆ. ‘‘ಇರುವುದು ಒಂದೇ ಒಪ್ಪಂದ. ಅದು ಸರಿಯಾಗಿದೆ ಹಾಗೂ ಅದನ್ನು ರಕ್ಷಿಸಬೇಕಾಗಿದೆ’’ ಎಂದು ಐರೋಪ್ಯ ಒಕ್ಕೂಟದ ವಿದೇಶ ನೀತಿ ಮುಖ್ಯಸ್ಥೆ ಫೆಡರಿಕಾ ಮೋಗರಿನಿ ಬ್ರಸೆಲ್ಸ್‌ನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News