ಅಂತಾರಾಷ್ಟ್ರೀಯ ಮಹಿಳಾ ಕ್ರೀಡಾಪಟುವಿಗೆ ವಂಚನೆ : ಶಿವಮೊಗ್ಗದಲ್ಲಿ ಮದುವೆ ನಿಲ್ಲಿಸಿ ಪರಾರಿಯಾದ ಬೆಂಗಳೂರಿನ ವೈದ್ಯ!

Update: 2018-04-26 17:48 GMT

ಶಿವಮೊಗ್ಗ, ಎ. 26: ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಅಂತಾರಾಷ್ಟ್ರೀಯ ಯಾಚಿಂಗ್ ಮಹಿಳಾ ಕ್ರೀಡಾಪಟುವೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರ ನರರೋಗ ತಜ್ಞ ವೈದ್ಯನೋರ್ವ, ಶಿವಮೊಗ್ಗ ಮೂಲದ ವೈದ್ಯೆಯೋರ್ವರನ್ನು ವಿವಾಹವಾಗಲು ಮುಂದಾಗಿ ಅರ್ಧಕ್ಕೆ ಮದುವೆ ನಿಲ್ಲಿಸಿ ಪರಾರಿಯಾದ ಕುತೂಹಲಕಾರಿ ಘಟನೆ ನಗರದಲ್ಲಿ ನಡೆದಿದೆ. 

ಮೂಲತಃ ಗುಲ್ಬರ್ಗಾದವರಾದ, ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರರೋಗ ತಜ್ಞರಾಗಿರುವ ಡಾ. ಆಕಾಶ್ ಔಟಿ ಆರೋಪಿತ ವೈದ್ಯ ಎಂದು ಗುರುತಿಸಲಾಗಿದೆ. ಗುರುವಾರ ನಗರದಲ್ಲಿ ಇವರ ವಿವಾಹ ನಡೆಯುತ್ತಿರುವ ಮಾಹಿತಿ ಅರಿತ ಮಹಿಳಾ ಕ್ರೀಡಾಪಟುವು, ಕೊಲ್ಲಾಪುರ ಪೊಲೀಸರೊಂದಿಗೆ ಶಿವಮೊಗ್ಗಕ್ಕೆ ದೌಡಾಯಿಸಿದ್ದರು. 

ಮಹಿಳಾ ಕ್ರೀಡಾಪಟು ಶಿವಮೊಗ್ಗಕ್ಕೆ ಆಗಮಿಸುತ್ತಿರುವ ವಿಷಯ ಅರಿತ ಆರೋಪಿಯು ಯುವತಿ ಮನೆಯವರಿಗೆ ತನ್ನ ಕಡೆಯವರು ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿ, ಮದುವೆಯನ್ನು ಅಧಕ್ಕೆ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕ್ರೀಡಾಪಟುವು ದೂರು ನೀಡಿದ್ದಾರೆ. 

ಪ್ರಕರಣದ ಹಿನ್ನೆಲೆ: ಕಳೆದೆರೆಡು ವರ್ಷಗಳ ಹಿಂದೆ ಕೊಲ್ಲಾಪುರ ಮೂಲದ ಅಂತಾರಾಷ್ಟ್ರೀಯ ಯಾಚಿಂಗ್ ಮಹಿಳಾ ಕ್ರೀಡಾಪಟು ಹಾಗೂ ಆರೋಪಿತ ವೈದ್ಯ ಡಾ. ಆಕಾಶ್ ಔಟಿ ನಡುವೆ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ, ದೈಹಿಕ ಸಂಪರ್ಕ ಕೂಡ ನಡೆದಿತ್ತು. ಆರೋಪಿಯು ಮದುವೆಯಾಗುವುದಾಗಿ ಭರವಸೆ ಕೂಡ ನೀಡಿದ್ದ. ಆದರೆ ನಂತರ ವಿವಾಹಕ್ಕೆ ನಕಾರ ವ್ಯಕ್ತಪಡಿಸಿದ್ದ. 

ಈ ಬಗ್ಗೆ ಮಹಿಳಾ ಕ್ರೀಡಾಪಟುವ ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಗುಲ್ಬರ್ಗಾದ ಪೊಲೀಸ್ ಠಾಣೆಗಳಲ್ಲಿ ಆರೋಪಿ ವೈದ್ಯನ ವಿರುದ್ದ ಅತ್ಯಾಚಾರ ಮತ್ತು ವಂಚನೆ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿ ವೈದ್ಯನು ಮೂಲತಃ ಶಿವಮೊಗ್ಗದವರಾದ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯೆಯೋರ್ವರ ಜೊತೆ ವಿವಾಹಕ್ಕೆ ಏರ್ಪಾಡು ಮಾಡಿಕೊಂಡಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News