ದಾವಣಗೆರೆ: ಮೇಯರ್, ಉಪಮೇಯರ್ ಅವಿರೋಧ ಆಯ್ಕೆ

Update: 2018-04-26 18:33 GMT

ದಾವಣಗೆರೆ, ಎ.26: ಮಹಾನಗರಪಾಲಿಕೆ 5ನೇ ಅವಧಿಗೆ 6ನೇ ಮೇಯರ್ ಆಗಿ 32ನೇ ವಾರ್ಡ್‌ನ ಸದಸ್ಯೆ ಶೋಭಾ ಪಲ್ಲಾಗಟ್ಟೆ ಹಾಗೂ ಉಪಮೇಯರ್ ಆಗಿ 13ನೇ ವಾರ್ಡ್‌ನ ಸದಸ್ಯ ಚಮನ್‌ಸಾಬ್ ಅವಿರೋಧವಾಗಿ ಆಯ್ಕೆಯಾದರು.

ಪಾಲಿಕೆ ಸಭಾಂಗಣದಲ್ಲಿ ಗುರುವಾರ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಎಸ್ ಕಳಸದ್ ಅಧ್ಯಕ್ಷತೆಯಲ್ಲಿ ನಡೆದ ಮೇಯರ್, ಉಪ ಮೇಯರ್ ಮತ್ತು 4 ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಈ ಇಬ್ಬರ ಆಯ್ಕೆ ನಡೆಸಲಾಯಿತು. ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಜಿಲ್ಲಾ ಹೈಕಮಾಂಡ್ ಸೂಚನೆ ಮೇರೆಗೆ ಸದಸ್ಯೆ ಶೋಭಾ ಪಲ್ಲಾಗಟ್ಟೆ ಎರಡು ನಾಮಪತ್ರ ಸಲ್ಲಿಸಿದ್ದು, ಮೊದಲನೇ ನಾಮಪತ್ರದ ಸೂಚಕರಾಗಿ ಸದಸ್ಯ ದಿನೇಶ್ ಕೆ.ಶೆಟ್ಟಿ, ಅನುಮೋದಕರಾಗಿ ಚಂದ್ರಶೇಖರ್ ಪಿ.ಎನ್. ಹಾಗೂ ಎರಡನೇ ನಾಮಪತ್ರಕ್ಕೆ ಗೌಡ್ರ ರಾಜಶೇಖರ್ ಸೂಚಕರಾಗಿ, ಜಿ.ಬಿ. ಲಿಂಗರಾಜ್ ಅನುಮೋದಕರಾಗಿದ್ದರು.

ನಾಮಪತ್ರ ಕ್ರಮಬದ್ಧವಾಗಿವೆ ಎಂದು ಘೋಷಿಸಿ ನಾಮಪತ್ರ ಹಿಂಪಡೆಯಲು ಆಯುಕ್ತರು ಐದು ನಿಮಿಷ ಸಮಯಾವಾಕಾಶ ನೀಡಿ, ನಂತರ ಏಕೈಕ ಅ್ಯರ್ಥಿ ಶೋಭಾ ಪಲ್ಲಾಗಟ್ಟೆ ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಉಪ ಮೇಯರ್ ಸ್ಥಾನಕ್ಕೆ 13ನೇ ವಾರ್ಡಿನ ಚಮನ್‌ಸಾಬ್ ಉಮೇದುವಾರಿಕೆಗೆ ರೇಖಾ ನಾಗರಾಜ್ ಸೂಚಕರಾಗಿ, ಅನಿತಾಬಾಯಿ ಮಾಲತೇಶ್ ಅನುಮೋದಕರಾಗಿದ್ದರು. ನಂತರ ಆಯುಕ್ತರು ಚಮನ್‌ಸಾಬ್ ಅವಿರೋಧವಾಗಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಒಟ್ಟು 41 ಪಾಲಿಕೆ ಸದಸ್ಯರಲ್ಲಿ ಕಾಂಗ್ರೆಸ್‌ನ 39 ಪಾಲಿಕೆ ಸದಸ್ಯರು ಪ್ರಚಂಡ ಬಹುಮತ ಹೊಂದಿರುವುದರಿಂದ ಕಾಂಗ್ರೆಸ್ ವತಿಯಿಂದ ಈ ಇಬ್ಬರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದ ಕಾರಣ ಯಾವುದೇ ಪೈಪೋಟಿ ಇರಲಿಲ್ಲ. ಒಂದು ವರ್ಷದ ಅವಧಿಗೆ ಮೇಯರ್, ಉಪ ಮೇಯರ್ ಆಯ್ಕೆ ನಡೆಯಿತು.

ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ್, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News