​ಚಿಕ್ಕಮಗಳೂರು: ವೀಕ್ಷಕರಿಂದ ಚುನಾವಣಾ ಸಿದ್ಧತೆ ಸಭೆ

Update: 2018-04-26 18:38 GMT

ಚಿಕ್ಕಮಗಳೂರು, ಎ.26: ವಿಧಾನಸಭಾ ಚುನಾವಣೇ 2018ರ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ಚುನಾವಣೆ ಸಿದ್ಧತೆಗಳ ಕುರಿತು ಜಿಲ್ಲೆಗೆ ಆಗಮಿಸಿರುವ ಚುನಾವಣಾ ಸಾಮಾನ್ಯ ವೀಕ್ಷಕರು ಮಾಹಿತಿ ಪಡೆದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣೆಗೆ ಸಂಬಂಧಿಸಿದ ವಿಷಯಗಳು ಹಾಗೂ ಕ್ರಮಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಚುನಾವಣಾ ನೋಡಲ್ ಅಧಿಕಾರಿಗಳ ಸಬೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರಿಂದ ಮಾಹಿತಿ ಪಡೆದರು.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಅಕ್ರಮ ತಡೆಗಟ್ಟಲು ಮತ್ತು ಮತದಾರರಿಗೆ ಕೊಡುವ ಉಡುಗೊರೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮತದಾರರ ಪಟ್ಟಿ ಸಿದ್ಧತೆ, ಮತಗಟ್ಟೆಗಳ ನಿರ್ಮಾಣ, ಮಹಿಳಾ ಮತದಾರರು ಹೆಚ್ಚು ಇರುವ ಕಡೆ ಪಿಂಕ್ ಮತಗಟ್ಟೆಗಳ ವ್ಯವಸ್ಥೆ ಹಾಗೂ ಅಂಗವಿಕಲರಿಗೆ ಮತದಾನ ಮಾಡಲು ರ್ಯಾಂಪ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಅಂಚೆ ಮತ ಪತ್ರ ಹಾಗೂ ಚುನಾವಣೆಗೆ ಸಂಬಂಧಿಸಿದ ದೂರುಗಳ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ಸಭೆಯಲ್ಲಿ ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.

ಜಿಲ್ಲೆಯ ಸೂಕ್ಷ್ಮ ಮತಗಟ್ಟೆಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಹಾಗೂ ಚುನಾವಣಾ ಆಕ್ರಮ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಮತ್ತು ಮತದಾನ ನಡೆಯುವ ದಿನ ಹಾಗೂ ಎಣಿಕೆಯ ದಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಕುರಿತಂತೆ ಜಿಲ್ಲಾ ಪೊಲೀಸ್ ವರಿಷಾ್ಠಧಿಕಾರಿ ಕೆ.ಅಣ್ಣಾಮಲೈ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಕುಮಾರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವ ಹಾಗೂ ವಿವಿ ಪ್ಯಾಟ್ ಹಾಗೂ ಇವಿಎಂಗಳ ಕುರಿತಂತೆ, ಚುನಾವಣಾ ಸಿದ್ಧತೆಗಳ ಕುರಿತು ಪೂರ್ಣ ಮಾಹಿತಿ ನೀಡಿದರು.

ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ ಮತದಾನದ ಮಹತ್ವದ ಬಗ್ಗೆ ಹಲವು ಜಾಗೃತಿ ಕಾರ್ಯಕ್ರಮ ಮತ್ತು ಜಾಥಾಗಳನ್ನು ಸ್ವೀಪ್ ಸಮಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ಸಾಮಾನ್ಯ ವೆಚ್ಚ ವೀಕ್ಷಕರಾದ ರಾಮ್‌ಪ್ರತಾಪ್ ಸಿಂಗ್ ಜಾಡಾನ್, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಜೆ.ಡಿ.ದೇಸಾಯಿ, ಚಿಕ್ಕಮಗಳೂರಿನ ವಿಧಾನಸಭಾ ಕ್ಷೇತ್ರದ ಮನಮೋಹನ್ ಚೌಧರಿ, ಕಡೂರು ವಿಧಾನಸಭಾ ಕ್ಷೇತ್ರದ ಭೂಪೇಂದ್ರ ಸಿಂಗ್, ತರೀಕೆರೆ ವಿಧಾನಸಭಾ ಕ್ಷೇತ್ರದ ಸಚಿನ್ ಸಿಂಧೆ, ಕಮಾಂಡೆಂಟ್ ಬಹದ್ದೂರ್ ಸೋನಾರ್ ಪೊಲೀಸ್ ವೀಕ್ಷಕರಾದ ಓಂ ಪ್ರಕಾಶ್ ನರ್ವಾಲ್, ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News