ಚಿಕ್ಕಮಗಳೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

Update: 2018-04-28 12:14 GMT

ಚಿಕ್ಕಮಗಳೂರು, ಎ.28: ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದ ಸಂಘಟನೆ ಸೇರಿದಂತೆ ಪಕ್ಷ ನೀಡಿದ ಎಲ್ಲ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ತನಗೆ ಮುಖಂಡರು ಸೂಕ್ತಸ್ಥಾನ ಮಾನಗಳನ್ನು ನೀಡಲು ಆರಂಭದಿಂದಲೂ ಹಿಂದೇಟು ಹಾಕಿದ್ದಾರೆ. ಕಡೂರು ಕ್ಷೇತ್ರದಿಂದ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಅನುವು ಮಾಡಿಕೊಡಲಿದೆ ಎಂದು ಭಾವಿಸಿದ್ದೆ. ಆದರೆ ಬಿಜೆಪಿಯ ಜಿಲ್ಲಾ ಹಾಗೂ ರಾಜ್ಯ ಮುಖಂಡರು ತನ್ನ ನಿರೀಕ್ಷೆಗಳನ್ನು ನುಚ್ಚುನೂರು ಮಾಡಿದ್ದಾರೆ. ಈ ಕಾರಣಕ್ಕೆ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆಂದು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಜಿಲ್ಲೆಯ ಕುರುಬ ಸಮುದಾಯದ ಪ್ರಭಾವಿ ನಾಯಕಿಎಂದೇ ಗುರುತಿಸಿಕೊಂಡಿರುವ ರೇಖಾ ಹುಲಿಯಪ್ಪಗೌಡ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷದ ಏಳಿಗೆಗೆ ಹಿಂದುಳಿದ ಸಮುದಾಯದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಕುರುಬ ಸಮುದಾಯದ ಜನತೆ ಪಕ್ಷದ ಸಂಘಟನೆಗೆ ಅವಿರತ ಶ್ರಮಿಸಿದ್ದಾರೆ. ತಾನು ಲಕ್ಯಾ ಜಿಪಂ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಿಪಂ ಸದಸ್ಯೆಯಾಗಿದ್ದೇನೆ. ಜಿಪಂ ಅಧ್ಯಕ್ಷೆಯಾಗಿ ಪಕ್ಷದ ಸಂಘಟನೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೆ. ಆದರೆ ಪಕ್ಷದ ಜಿಲ್ಲಾ ಮುಖಂಡರು ಹಿಂದುಳಿದ ವರ್ಗದವರನ್ನು ಪಕ್ಷದ ಏಳಿಗೆಗೆ ಬಳಸಿಕೊಂಡರೇ ಹೊರತು ಆ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡದೇ ನಿರ್ಲಕ್ಷಿಸಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿಗಳನ್ನು ನೋಡಿ ಮಣೆ ಹಾಕಲಾಗುತ್ತಿದ್ದು, ಪಕ್ಷಕ್ಕಾಗಿ ತ್ಯಾಗ ಮಾಡಿದವರನ್ನು ಗುರುತಿಸುವಲ್ಲಿ ಮುಖಂಡರು ವಿಫಲರಾಗಿದ್ದಾರೆ. ಬಿಜೆಪಿಯಲ್ಲಿ ಸಮಾಜಿಕ ನ್ಯಾಯ ಎಂಬುದು ಮರೀಚಿಕೆಯಾಗಿದೆ ಎಂದು ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಮೂರು ವಿಧಾನಸಭೆ ಚುನಾವಣೆಗಳಲ್ಲೂ ಹಿಂದುಳಿದ ವರ್ಗಗಳಿಗೆ ಬಿಜೆಪಿ ಮುಖಂಡರು ಅನ್ಯಾಯ ಮಾಡಿದ್ದಾರೆ. ಶೋಷಿತ ವರ್ಗಗಳನ್ನು ಗುರುತಿಸುವಲ್ಲಿ ಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಪದೇ ಪದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದ ಅವರು, ತಾನು ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲೂ ಕಡೂರು, ತರೀಕೆರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದೆ. ಪಕ್ಷದ ಮುಖಂಡರು ಹಿಂದುಳಿದ ವರ್ಗಗಳ ಮುಖಂಡರನ್ನು ಗುರುತಿಸಿ ಈ ಕ್ಷೇತ್ರಗಲ್ಲಿ ತನಗೆ ಟಿಕೆಟ್ ನೀಡಲಿದ್ದಾರೆಂಬ ಆಕಾಂಕ್ಷಿಯಿಂದ ಹಿಂದಿನ ಚುನಾವಣೆಗಳಲ್ಲಿ ತಯಾರಿಯನ್ನೂ ಮಾಡಿಕೊಂಡಿದ್ದೆ. 2013ರ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಕಡೂರು ದೇವರಾಜ್ ಎಂಬವರಿಗೆ ಮುಖಂಡರು ಟಿಕೆಟ್ ನೀಡಿದ್ದರು. ಹಿಂದಿನ ಎರಡು ಬಾರಿಯೂ ತನಗೆ ಟಿಕೆಟ್ ಕೈ ತಪ್ಪಿದೆ. ಕೊನೆ ಪಕ್ಷ ಈ ಬಾರಿಯಾದರೂ ಕಡೂರು ಕ್ಷೇತ್ರದಿಂದ ತನಗೆ ಹಾಗೂ ತರೀಕೆರೆ ಕ್ಷೇತ್ರದಿಂದ ಗೋಪಿಕೃಷ್ಣ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಆಶಾಭಾವನೆ ಹೊಂದಿದ್ದೆ. ಕಡೂರು ಕ್ಷೇತ್ರದಲ್ಲಿ ತಾನು ಕಳೆದ ಎರಡು ವರ್ಷಗಳಿಂದ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದೇನೆ. ಈ ಬಾರಿ ತಾನೇ ಅಭ್ಯರ್ಥಿ ಎಂದು ಪ್ರಚಾರದಲ್ಲೂ ತೊಡಗಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಸಮುದಾಯದ ಮುಖಂಡರನ್ನು ಸೇರಿಸಿ ಸಭೆಗಳನ್ನೂ ನಡೆಸಿದ್ದೆ. ಆದರೆ ಬಿಜೆಪಿ ಪಕ್ಷದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನಾಯಕರು ಕೊನೆಗಳಿಗೆಯಲ್ಲಿ ತನ್ನನ್ನು ಕಡೆಗಣಿಸಿ ಸಮುದಾಯದವರನ್ನು ಕೆರಳುವಂತೆ ಮಾಡಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠೆಗೆ ಬೆಲೆ ಇಲ್ಲದ ಮೇಲೆ ಅಲ್ಲಿರುವುದು ಬೇಡ ಎಂಬ ಸಮುದಾಯದ ಮುಖಂಡರ ಒಕ್ಕೊರಲ ಮನವಿಗೆ ಮಣಿದು ಬಿಜೆಪಿ ತೊರೆಯುವ ನಿರ್ಧಾರ ಮಾಡಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆಂದರು.

ಬಿಜೆಪಿ ಸರಕಾರದಲ್ಲಿ ತನಗೆ ಮುಖಂಡರು ತಾನು ತೆಂಗು ಮತ್ತು ನಾರು ಅಭಿವೃದ್ಧಿ ನಿಗದ ಅಧ್ಯಕ್ಷೆಯ ಸ್ಥಾನಮಾನ ನೀಡಿದ್ದರು. ತಾನು ಅಧ್ಯಕ್ಷೆಯಾದಾಗ ನಿಗಮ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. 3 ಕೋ.ರೂ. ನಷ್ಟ ಅನುಭವಿಸಿತ್ತು. ನೌಕರರಿಗೆ ವೇತನ ಪಾವತಿ ಕಷ್ಟವಾಗಿತ್ತು. ತೆಂಗಿನ ಉತ್ಪನ್ನ ತಯಾರಕರಿಗೆ ಬ್ಯಾಂಕ್‍ಗಳು ಸಾಲ ನೀಡುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಾನು ಸಮರ್ಥವಾಗಿ ಸಂಸ್ಥೆಯನ್ನು ನಿಭಾಯಿಸಿದ್ದೇನೆ. ನಿಗದಲ್ಲಿನ ಹಣದ ಸೋರಿಕೆಗೆ ಕಡಿವಾಣ ಹಾಕಿದ್ದೇನೆ. ಆರ್ಥಿಕ ಸಂಕಷ್ಟದಲ್ಲಿದ್ದ ನಿಗಮವನ್ನು ಸಾಲದ ಸುಳಿಯಿಂದ ಪಾರು ಮಾಡಿ, ಲಾಭ ಗಳಿಸುವಂತೆ ಮಾಡಿದ್ದೆ. ಹೊಸ ಹೊಸ ಘಟಕಗಳ ಮೂಲಕ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ ಪಕ್ಷದ ಮುಖಂಡರು ಮಹಿಳೆಯಾಗಿ ತಾನು ಮಾಡಿದ ಕೆಲಸವನ್ನು ಮೆಚ್ಚಿದರೇ ಹೊರತು. ಇದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೂಕ್ತ ಸ್ಥಾನಮಾನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರಿಗೆ ಬಿಜೆಪಿಯಿಂದ ಪದೇಪದೇ ಅವಮಾನವಾಗಿದೆ. ಈ ಅವಮಾನವನ್ನು ಸಹಿಸುವುದೂ ಒಂದು ಅಪರಾಧ ಎಂದು ಭಾವಿಸಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆಂದರು.

ಸುದ್ದಿಗೋಷ್ಠಿಯಲ್ಲಿ ರೇಖಾ ಬೆಂಬಲಿಗರಾದ ಪುಟ್ಟೇಗೌಡ, ನಿಡಘಟ್ಟ ಗ್ರಾಪಂ ಅಧ್ಯಕ್ಷೆ ಗೀತಾ, ಧನಂಜಯ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಸೇರುವ ಮುನ್ಸೂಚನೆ: ತನ್ನ ಮುಂದಿನ ದಾರಿಯ ಬಗ್ಗೆ ಎನ್ನೆರೆಡು ದಿನಗಳಲ್ಲಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ ರೇಖಾ ಹುಲಿಯಪ್ಪಗೌಡ, ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಎಲ್.ಶಂಕರ್ ಅವರಿಂದ ಕಾಂಗ್ರೆಸ್ ಪಕ್ಷ ಸೇರುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನೆರೆಡು ದಿನಗಳಲ್ಲಿ ತಿಳಿಸುತ್ತೇನೆ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುನ್ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News