ಕಾಂಗ್ರೆಸ್‍ನಿಂದ ಕೀಳುಮಟ್ಟದ ರಾಜಕೀಯ: ಹೆಚ್.ಡಿ. ದೇವೇಗೌಡ

Update: 2018-04-28 11:58 GMT

ಹಾಸನ,ಎ.28: ಮೇ.12ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯಾಧ್ಯಂತ ಸಮರಕ್ಕೆ ಜೆಡಿಎಸ್ ಸಿದ್ದವಾಗಿದ್ದು, ಕಾಂಗ್ರೆಸ್ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾಧ್ಯಂತ ಎಲ್ಲಾ ಕಡೆ ನಾಮಪತ್ರ ಸಲ್ಲಿಸಿ, ವಾಪಸ್ ಪಡೆಯುವ ಪ್ರಕ್ರಿಯೇ ಮುಗಿದಿದೆ. ಇನ್ನು 10 ರಿಂದ 12 ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜ್ಯಾಧ್ಯಂತ ಸಮರಕ್ಕೆ ನಾವು ಸಿದ್ಧವಾಗಿದ್ದೇವೆ ಎಂದರು. ಗೌರಿ ಬಿದನೂರಿನಲ್ಲಿ ಕಾಂಗ್ರೆಸ್‍ನವರಿಂದ ಹೇಯ ಕೃತ್ಯ ನಡೆದಿದೆ. ಮುಂದಿನ ತಿಂಗಳು 6 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಅದೇ ಹುಡುಗನ ಕೊಲೆ ಆಗಿದೆ. ಈ ಬಗ್ಗೆ ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ 40 ಕಡೆ ನನ್ನ ಕಾರ್ಯಕ್ರಮ ನಿಗದಿ ಮಾಡಿದ್ದಾರೆ. ಹಲವು ಭಾಗಕ್ಕೆ ಪ್ರಚಾರಕ್ಕಾಗಿ ನಾನು ತೆರಳುವೆ. ಉಳಿದ ಭಾಗಗಳಲ್ಲಿ ಕುಮಾರಸ್ವಾಮಿ ತೆರಳಿಲಿದ್ದಾರೆ. ತವರು ಜಿಲ್ಲೆ ಹಾಸನದಲ್ಲಿ ನಾನು 2 ದಿನ ಪ್ರವಾಸ ಮಾಡುತ್ತೇನೆ. ನಮ್ಮಲ್ಲಿ ಸ್ಟಾರ್ ಕ್ಯಾಂಪೇನರ್ ಇಲ್ಲ ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಬೆಂಬಲಿಸಿ ಎಂದು ಮಾಯಾವತಿ, ಚಂದ್ರ ಶೇಖರರಾವ್ ಮತ್ತು ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ. ಮುಂದಿನ ತಿಂಗಳು 5 ಮತ್ತು 6 ರಂದು ಬೆಳಗಾಂ, ವಿಜಾಪುರ, ಕೋಲಾರ ಹಾಗೂ ಬೀದರ್ ನ ನಾಲ್ಕು ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಲೋಕಾಯುಕ್ತ ತಂದವರು ನಾವು. ನಾಶ ಮಾಡಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದ ಅವರು, ಪ್ರಧಾನಿ ಮೋದಿ ಬಗ್ಗೆ ವಿಮರ್ಶೆಯನ್ನು ನಾನು ಮಾಡುವುದಿಲ್ಲ. ಜನರೆ ಮಾಡುತ್ತಾರೆ. ಈಗ ಅವರ ವರ್ಚಸ್ಸು ಕ್ರಮೇಣ ಕಡಿಮೆಯಾಗಿದೆ. ಅವರ ಪ್ರಭಾವ ರಾಜ್ಯಕ್ಕೆ ಬೀರದು. ಜೆಡಿಎಸ್ ಪ್ರಗತಿ ತಾಳಲಾರದೆ ನಮ್ಮ ಮೇಲೆ ಬಿಜೆಪಿ ಜೊತೆ ಹೊಂದಾಣಿಕೆ ಸೇರಿ ಹಲವು ಆರೋಪವನ್ನು ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ದೂರಿದರು. ಬೇಕಾದರೇ ನಾನೇ ಸಿಎಂ ಅಂತ ಸಿದ್ದರಾಮಯ್ಯ, ಯಡಿಯೂರಪ್ಪ ಹೇಳಿಕೊಳ್ಳಲಿ. ಕೊನೆಯ ತೀರ್ಮಾನ ಮಾಡುವುದು ನಾಡಿನ ಜನರು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಮುಖ್ಯಮಂತ್ರಿ ಬಳಿ ಗುಪ್ತಚರ ವರದಿ ಇದೆ. ಅದರಂತೆ ಚಾಮುಂಡೇಶ್ವರಿ ಜೊತೆಗೆ ಬಾದಾಮಿಗೆ ಪಲಾಯನ ಮಾಡಿರಬಹುದು. ಬಿಜೆಪಿ ಕಾಂಗ್ರೆಸ್ ಭ್ರಷ್ಟಚಾರದ ಪಟ್ಟಿ ಬಿಡುಗಡೆ ಮಾಡಿದರೆ, ಬಿಜೆಪಿ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದಾರೆ. ಅವರ ಮೇಲೆ ಇವರು ಇವರ ಮೇಲೆ ಅವರು ಬಿಡುಗಡೆ ಮಾಡಿಕೊಂಡಿರುವುದು ಜನತೆಗೆ ತಿಳಿದಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ ಎಂದರು.

ಅಂಬರೀಶ್ ಬಗ್ಗೆ ನನಗೆ ಅಭಿಮಾನ ಇದೆ. ನನ್ನ ಬಗ್ಗೆ ಅವರಿಗೆ ಅಭಿಮಾನ ಇದೆ. ದೊಡ್ಡ ಕಲಾವಿದ ಆಗಿದ್ದಾರೆ. ಪಕ್ಷಕ್ಕೆ ಬರುವ ಬಗ್ಗೆ ಮಾತನಾಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಇನ್ನು ಝಮೀರ್ ಅಹಮದ್ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ. ಸಿದ್ದರಾಮಯ್ಯ ಈಗಲೂ ದೇವೇಗೌಡ ಮತ್ತವರ ಮಕ್ಕಳನ್ನು ಮುಗಿಸಲೇ ಬೇಕು ಎಂದು ಹೊರಟಿದ್ದಾರೆ. ನಾನು ಅವರ ಬಗ್ಗೆ ಎಂದು ಈ ರೀತಿ ಮಾತನಾಡಿಲ್ಲ. ನಾವೇನು ಪಾಪ ಮಾಡಿದ್ದೇವೆ. ಕಾಂಗ್ರೆಸ್ ನವರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜ್ವಲ್ ಜಿಲ್ಲಾದ್ಯಂತ ಪ್ರಚಾರ ಮಾಡಿ, ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸು ಎಂದಿದ್ದೇನೆ. ಪ್ರಜ್ವಲ್‍ನ ಯಾರೂ ನಿರ್ಲಕ್ಷ್ಯ ಮಾಡಲು ಆಗಲ್ಲ. ಅವನಿಗೆ ಅವನದೇ ಆದ ಶಕ್ತಿ ಇದೆ. ಆಗೆ ಅವಕಾಶ ಹುಡುಕಿಕೊಂಡು ತಾನಾಗೆ ಬರಲಿದೆ. ಯಾರ ಹಣೇಬರಹ ಯಾರೂ ತೆಗೆಯಲು ಆಗುವುದಿಲ್ಲ ಎಂದರು. ಗೊಣ್ಣೆ ಸುರಿಸಿಕೊಂಡು ಕುಳಿತಿದ್ದ ನಾನು ಪ್ರಧಾನಿ ಆಗಲಿಲ್ಲವೇ ಎಂದು ತಮಾಷೆಯ  ರೀತಿಯಲ್ಲಿ ಹೇಳಿದರು. 

ಈ ಸಂದರ್ಭದಲ್ಲಿ ಶಾಸಕ ಹೆಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News