ಹಾಸನ: ಕಟ್ಟಾಯ ಅಶೋಕ್, ಮುರುಳಿಮೋಹನ್ ಸೇರಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‍ ಸೇರ್ಪಡೆ

Update: 2018-04-28 12:04 GMT

ಹಾಸನ,ಎ.28: ಬಿಜೆಪಿ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗದ ಇಬ್ಬರು ಮುಖಂಡರು ಹಾಗೂ 150 ಕ್ಕೂ ಹೆಚ್ಚು ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ನೇತೃತ್ವದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಹಾಸನ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಕಟ್ಟಾಯ ಅಶೋಕ್ ಹಾಗೂ ಸಕಲೇಶಪುರದ ಮುರುಳಿ ಮೋಹನ್ ಸೇರಿ 150 ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷದಿಂದ ಕಾಂಗ್ರೆಸ್‍ಗೆ ಸೇರಿದರು. ಜಿಲ್ಲಾ ಮಂತ್ರಿ ಎ. ಮಂಜು ಮತ್ತು ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ. ಮಹೇಶ್ ಶಾಲು ಹೊದಿಸಿ, ಮಾಲೆ ಹಾಕುವುದರ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಟ್ಟಾಯ ಅಶೋಕ್, ಕಳೆದ 18 ವರ್ಷಗಳಿಂದ ಬಿಜೆಪಿಗಾಗಿ ದುಡಿದ ನನಗೆ ಹೆತ್ತ ತಂದೆ ಎಂದು ನಂಬಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ತಾಯಿ ಸ್ಥಾನದಲ್ಲಿದ್ದ ಶೋಭಾ ಕರಂದ್ಲಾಜೆ ಮೋಸ ಮಾಡಿದರು ಎಂದು ದೂರಿದರು. ನನಗೆ ಟಿಕೆಟ್ ನೀಡುತ್ತೇನೆಂದು ಯಡಿಯೂರು ಸಿದ್ಧಲಿಂಗೇಶ್ವರನ ಮೇಲೆ ಆಣೆ ಪ್ರಮಾಣ ಮಾಡಿದ್ದ ಯಡಿಯೂರಪ್ಪ ಮೋಸ ಮಾಡಿದರು. ದುಡ್ಡಿಗಾಗಿ ಟಿಕೆಟ್ ಮಾರಿಕೊಂಡರು. ಜನಸಾಮಾನ್ಯರು ಬಿಜೆಪಿಯನ್ನು ನಂಬಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಮುರುಳಿ ಮೋಹನ್ ಮಾತನಾಡಿ, ನೆಲೆಯೇ ಇಲ್ಲದ ಆಲೂರು ಭಾಗದಲ್ಲಿ ತಳಮಟ್ಟದಿಂದ ಬಿಜೆಪಿ ಕಟ್ಟಿದ ನನಗೆ ಯಡಿಯೂರಪ್ಪ ದ್ರೋಹ ಬಗೆದಿದ್ದಾರೆ. ರಾಜ್ಯ ಬಿಜೆಪಿ ನಮಗೆ ಮಾತ್ರವಲ್ಲದೆ ಕೋಟ್ಯಾಂತರ ಜನರಿಗೆ ಮೋಸ ಮಾಡಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು. ಸಕಲೇಶಪುರ ಕ್ಷೇತ್ರದ ಬಿ ಫಾರಂನ್ನು ಬಿಜೆಪಿ ನಾರ್ವೆ ಸೋಮಶೇಖರ್ ಎಂಬವರಿಗೆ ಮಾರಿಕೊಂಡಿದೆ. ಕ್ಷೇತ್ರದ ಜನರು ಎಚ್ಚೆತ್ತುಕೊಂಡು ದಲಿತ ವಿರೋಧಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿ, ಮುರುಳಿ ಮೋಹನ್ ಹಾಗೂ ಕಟ್ಟಾಯ ಅಶೋಕ್ ಅವರನ್ನು ಪಕ್ಷಕ್ಕೆ ಸೇರುವಂತೆ ಮನವಿ ಮಾಡಿದ್ದೆ. ಮುಂದಿನ ದಿನಗಳಲ್ಲಿ ಇವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News