ಸಂವಿಧಾನದ ಉಳಿವಿಗಾಗಿ ತುತ್ತೂರಿ ಊದುತ್ತಲೇ ಇರುತ್ತೇನೆ: ದಿನೇಶ್ ಅಮೀನ್‍ ಮಟ್ಟು

Update: 2018-04-28 13:59 GMT

ಮೈಸೂರು,ಎ.28: ಸಂವಿಧಾನ ಉಳಿವಿಗಾಗಿ ನಾನು ಬದುಕಿರುವವರೆಗೆ ತುತ್ತೂರಿ ಊದುತ್ತಲೇ ಇರುತ್ತೇನೆ. ಮುಂದೆ ಏನಾದರು ಎತ್ತಿಕೊಳ್ಳಬೇಕು ಎಂದರೆ ಅದನ್ನು ಎತ್ತಿಕೊಳ್ಳಲು ಸಿದ್ಧರಿದ್ದೇವೆ ಎಂದು ಸಂವಿಧಾನ ವಿರೋಧಿಗಳಿಗೆ ಮಾಧ್ಯಮ ಚಿಂತಕ ದಿನೇಶ್ ಅಮೀನ್‍ಮಟ್ಟು ಎಚ್ಚರಿಕೆ ನೀಡಿದರು.

ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶನಿವಾರ ನಗರದ ಕುಂಚಿಟಿಗರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ಉಳಿಸಿ ವಿಚಾರ ಸಂಕಿರಣ, ಸಂವಾದದಲ್ಲಿ ಭಾಗವಹಿಸಿ, ಸಾಮಾಜಿಕ, ಸಾಂಸ್ಕೃತಿಕ ಸವಾಲುಗಳು ಕುರಿತು ಮಾತನಾಡಿದರು.

ಸಂವಿಧಾನ ಉಳಿವಿಗಾಗಿ ಪ್ರಗತಿಪರರ ತುತ್ತೂರಿ ಎಂದು ಒಂದು ಪತ್ರಿಕೆ ಬರೆಯುತ್ತದೆ. ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೆ ಗೌರವ ,ಘನತೆ , ಜವಾಬ್ದಾರಿ, ಮತ್ತು ಮರ್ಯಾದೆಯನ್ನು ತಂದುಕೊಟ್ಟಿದೆ. ಸಂವಿಧಾನದ ಬಗ್ಗೆ ಚರ್ಚೆಗಳಾಗುತ್ತಿದೆ. ಸಂವಿಧಾನದ ಉಳಿವಿಗಾಗಿ ನಾನು ಬದುಕಿರುವವರೆಗೂ ಹೋರಾಟ ಮಾಡುತ್ತಲೆ ಇರುತ್ತೇನೆ ಎಂದು ಹೇಳಿದರು.

ಸಂವಿಧಾನ ವಿರೋಧಿಸುವವರನ್ನು ನಾವು ವಿರೋಧಿಸುತ್ತಲೇ ಇರುತ್ತೇವೆ. ಸಂಘಪರಿವಾರ, ಆರೆಸ್ಸೆಸ್ ಸಂವಿಧಾನದ ಆಶಯಗಳನ್ನು ಅನುಷ್ಠಾನಕ್ಕೆ ತಂದಿದ್ದಾರಾ ಎಂಬುದನ್ನು ನೋಡಬೇಕಿದೆ. ಆರ್ಥಿಕ, ಸಾಮಾಜಿಕ ನ್ಯಾಯದ ಪರ, ಸೋದರತ್ವದ ಪರ ಇದ್ದಾರ ಅಥವಾ ಇಲ್ಲವಾ ಎಂಬುದನ್ನು ನೋಡಬೇಕಿದೆ ಎಂದು ಹೇಳಿದರು.

ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ಬಹಳ ಜವಾಬ್ದಾರಿಯಿಂದ ಎದುರಿಸಬೇಕಿದೆ. ನಮ್ಮ ಮುಂದೆ ಮೂರು ಪ್ರಮುಖ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. ಯಾರು ಸಂವಿಧಾನ ವಿರೋಧಿಗಳು, ಯಾರು ಸಂವಿಧಾನದ ಪರ ಇದ್ದಾರೆ ಎಂಬುದನ್ನು ತೀರ್ಮಾನ ಮಾಡಬೇಕಿದೆ. ಯಾವುದೇ ರಾಜಕೀಯ ಪಕ್ಷಗಳ ಮುಖಂಡರ ಭಾಷಣದ ಆಧಾರದ ಮೇಲೆ ಅಳೆಯಬಾರದು. ಆ ಪಕ್ಷಗಳ ಹಿನ್ನಲೆ ಎಂತಹದು ಎಂದು ಯೋಚಿಸಬೇಕು. ಜಾತ್ಯಾತೀತ ಎಂದು ಹೇಳುವ ಕುಮಾರಸ್ವಾಮಿ ಅಧಿಕಾರಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿರುವ ಸಂಗತಿಯನ್ನು ಮರೆಯಬಾರದು. ನಾನು ನೇರವಾಗಿ ಹೇಳುವುದಾದರೆ ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಹೇಳಿದರು.

ಬಿಜೆಪಿಯವರು ಎರಡು ಹಿಡೆನ್ ಅಜೆಂಡಾಗಳನ್ನು ಹೊಂದಿದ್ದಾರೆ. ಒಂದು ಓಪನ್ ಹಿಡೆನ್ ಅಜೆಂಡಾ. ಅಲ್ಲಿ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ, ಮತ್ತೊಂದು ನಾಗಪುರ, ದೆಹಲಿಯಲ್ಲಿನ ಮನುಸ್ಮುತಿ ಅಜೆಂಡಾ. ಅಲ್ಲೇನಿದ್ದರೂ ಸಾಂಸ್ಕೃತಿಕ ರಾಷ್ಟ್ರೀಯತೆ, ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಕೇಳಿಬರುತ್ತದೆ. ಈ ದೇಶವನ್ನು ಹೇಗೆ ಕೇಸರಿಕರಣಗೊಳಿಸಬೇಕು ಎಂಬ ಚಿಂತನೆ ನಡೆಯುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಭರವಸೆಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಾಕತ್ತಿದ್ದರೆ 2 ಕೋಟಿ ಉದ್ಯೋಗ, ಪ್ರತಿ ಬಡವನ ಖಾತೆಗೆ 5 ಲಕ್ಷ, ಕಪ್ಪು ಹಣ ಹೊರತೆಗೆಯುವುದನ್ನು ಈಡೇರಿಸಲಿ. ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಮಾತನಾಡಲಿ. ಸಿದ್ದರಾಮಯ್ಯ, ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ, 159 ಭರವಸೆಗಳನ್ನು ಈಡೇರಿಸಿದ್ದಾರೆ. ಅದರ ಅಂಕಿ ಅಂಶಗಳು ನನ್ನ ಬಳಿ ಇವೆ. ಬೇಕಿದ್ದರೆ ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಸಂವಿಧಾನ ಮತ್ತು ಚುನಾವಣಾ ರಾಜಕೀಯ ಸವಾಲುಗಳು, ನಿಲುವುಗಳು ವಿಚಾರ ಕುರಿತು ಮಾತನಾಡಿದ ಸಾಹಿತಿ ಡಾ.ಕೆ.ಮರಳಸಿದ್ದಪ್ಪ, ಅಂಬೇಡ್ಕರ್ ಸಂವಿಧಾನ ಬರೆದಿರುವುದು ಸಂಪ್ರದಾಯವಾದಿ ಪರಂಪರಗೆ ದೊಡ್ಡ ಅಘಾತ. ಬಹುತ್ವ ನಾಶ ಪಡಿಸುವುದು, ಪಾಳೇಗಾರಿಕೆ, ವೈದಿಕ ಪರಂಪರೆಯನ್ನು ಆಧರಿಸಿ ಹೊಸ ಸಂವಿಧಾನ ತರಲು ಸಂವಿಧಾನ ಬದಲಾಯಿಸುವ ಹಿಂದಿನ ಉದ್ದೇಶವಾಗಿದೆ. ಅನಂತಕುಮಾರ್ ಹೆಗಡೆ ಹೇಳಿಕೆ ಹಿಂದೆ ಇಡೀ ಬಿಜೆಪಿಯಿದೆ ಎಂದು ತಿಳಿಸಿದರು. ಅನ್ನಭಾಗ್ಯದ ಅರ್ಹರಲ್ಲದವರು ಸೋಮಾರಿಗಳು. ಅನ್ನಭಾಗ್ಯ, ಕ್ಷೀರಭಾಗ್ಯ ಬಡವರ ಸಿಟ್ಟನ್ನು ಅದುಮಿಟ್ಟಿದೆ. ಸಂವಿಧಾನ ಅಲ್ಪಸಂಖ್ಯಾತರು, ದಲಿತರಿಗೆ ರಕ್ಷಣೆ, ಸೌಲಭ್ಯ ಕೊಡದಿದ್ದರೆ ಅವರೆಲ್ಲ ಕೈಗೆ ಆಯುಧ ತೆಗೆದುಕೊಂಡು ಕ್ರಾಂತಿ ಮಾಡುತ್ತಿದ್ದರು. ಸಂವಿಧಾನ ಉಳಿಸುವ ಮಾತುಗಳನ್ನಾಡುವ ಸಂದರ್ಭದಲ್ಲಿ ಚುನಾವಣೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ಇದು ಸಾಮಾನ್ಯ ಚುನಾವಣೆಯಲ್ಲ ಎಂದರು.

ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಪ್ರಗತಿಪರ ಚಿಂತಕ ಕೆ.ಆರ್.ಗೋಪಾಲ್, ಕೆ.ಎಸ್.ಶಿವರಾಮ್, ದಸಂಸ ಸಂಚಾಲಕರಾದ ಶಂಕರಪುರ ಸ್ವಾಮಿ, ಮಲ್ಲಹಳ್ಳಿ ನಾರಾಯಣ, ರೈತ ಸಂಘದ ವಿದ್ಯಾಸಾಗರ, ಪಿಎಫ್‍ಐನ ಕಲೀಂ, ಗೋವಿಂದರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News