ಅಪ್ನಾ ಘರ್‌ನಲ್ಲಿ ಅಪ್ರಾಪ್ತರಿಗೆ ಲೈಂಗಿಕ ಶೋಷಣೆ: ಮೂವರಿಗೆ ಜೀವಾವಧಿ ಶಿಕ್ಷೆ

Update: 2018-04-28 15:46 GMT

ಚಂಡಿಗಢ, ಎ. 28: ಹರ್ಯಾಣದ ರೋಹ್ಟಕ್ ಪಟ್ಟಣದ ಅಪ್ನಾ ಘರ್ ಆಶ್ರಯ ಧಾಮದಲ್ಲಿದ್ದ ಅಪ್ರಾಪ್ತರನ್ನು ಲೈಂಗಿಕವಾಗಿ ಶೋಷಿಸಿದ ಪ್ರಕರಣದಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ಜಸ್ವಂತ್ ದೇವಿ ಹಾಗೂ ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಎಪ್ರಿಲ್ 18ರಂದು ಆರೋಪಿಗಳನ್ನು ಅಪರಾಧಿಗಳು ಎಂದು ಪರಿಗಣಿಸಿರುವ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್, ಅಪ್ನಾ ಘರ್ ನಡೆಸುತ್ತಿದ್ದ ಜಸ್ವಂತಿ ದೇವಿ, ಆಕೆಯ ಅಳಿಯ ಜೈ ಭಗವಾನ್ ಹಾಗೂ ವಾಹನ ಚಾಲಕ ಸತೀಶ್‌ಗೆ ಶಿಕ್ಷೆ ಘೋಷಿಸಿದರು. ಜಸ್ವಂತಿ ಸಹೋದರ ಜಸ್ವಂತ್ ಸಿಂಗ್‌ಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ರೋಹ್ಟಕ್‌ನ ಶೃಂಗಾರ್ ಕಾಲನಿಯಲ್ಲಿ ಸರಕಾರೇತರ ಸಂಸ್ಥೆ ಭಾರತ್ ವಿಕಾಸ್ ಸಂಘ ಆಪ್ನಾ ಘರ್ ಆಶ್ರಯ ಧಾಮ ನಡೆಸುತ್ತಿತ್ತು. ಪ್ರಕರಣದ ವಿಚಾರಣೆ ಸಂದರ್ಭ ಅನೇಕ ಸಂತ್ರಸ್ತರು ಜಸ್ವಂತಿ ಅವರನ್ನು ಗುರುತಿಸಿದ್ದರು. ಈಗಾಗಲೇ ಕಾರಾಗೃಹದಲ್ಲಿ ಕಾಲ ಕಳೆದಿರುವುದರಿಂದ ಜಸ್ವಂತಿ ಪುತ್ರಿ ಸುಷ್ಮಾ ಆಲಿಯಾಸ್ ಸುಮ್ಮಿ, ಸತೀಶ್ ಸಹೋದರಿ ಶೀಲಾ ಹಾಗೂ ಸಮಾಲೋಚಕಿ ವೀಣಾ ಅವರನ್ನು ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಇತರ ಇಬ್ಬರು ಆರೋಪಿಗಳಾದ ರೋಷನಿ ಹಾಗೂ ರಾಮ್ ಪ್ರಕಾಶ್ ಸೈನಿ ಅವರನ್ನು ಪ್ರೊಬೆಶನ್ ಮೇಲೆ ಬಿಡುಗಡೆಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಮಕ್ಕಳ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಸಾಗಾಟ, ದುಃಖ ಉಂಟು ಮಾಡಿರುವುದು, ಲೈಂಗಿಕ ಕಿರುಕುಳ, ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿರುವುದು, ಕ್ರೂರತೆ ಆರೋಪಗಳನ್ನು ದಾಖಲಿಸಲಾಗಿತ್ತು.

ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅಪರಾಧಿಗಳ ಪರ ವಕೀಲ ಅಭಿಶೇಕ್ ಸಿಂಗ್ ರಾಣಾ ಹೇಳಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ 2012 ಮೇ 9ರಂದು ರೋಹ್ಟನ ಶೃಂಗಾರ್ ಕಾಲನಿಯಲ್ಲಿರುವ ಆಶ್ರಯ ಧಾಮ ‘ಆಪ್ನಾ ಘರ್’ ಮೇಲೆ ದಿಢೀರ್ ದಾಳಿ ನಡೆಸಿತ್ತು ಹಾಗೂ ಈ ಆಶ್ರಯ ಧಾಮದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 100ಕ್ಕೂ ಅಧಿಕ ಅಪ್ರಾಪ್ತರನ್ನು ರಕ್ಷಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಪ್ರಕರಣ ದಾಖಲಿಸಿತ್ತು ಹಾಗೂ ಜಸ್ವಂತಿ ದೇವಿ, ಅವರ ಪುತ್ರಿ ಸುಶ್ಮಾ ಹಾಗೂ ಅಳಿಯ ಭಗವಾನ್ ಸೇರಿದಂತೆ 7 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅನಂತರ ರೋಶ್ನಿ, ರಾಮ್ ಪ್ರಕಾಶ್ ಸೈನಿ ಹಾಗೂ ಅಂಗ್ರೇಜ್ ಕ್ರೌರ್ ಹೂಡಾ ವಿರುದ್ಧ ಎರಡನೇ ಆರೋಪ ಪಟ್ಟಿ ದಾಖಲಿಸಲಾಗಿತ್ತು. ಈ ಪ್ರಕರಣದ 10 ಮಂದಿ ಆರೋಪಿಗಳಲ್ಲಿ ಅಂಗ್ರೇಜ್ ಕೌರ್ ಹೂಡಾನನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News