ನವವಿವಾಹಿತೆಯ ಕೊಂದು ಆಭರಣ ದೋಚಿದ ದುಷ್ಕರ್ಮಿಗಳು

Update: 2018-04-28 16:01 GMT

ಲಕ್ನೋ, ಎ.28: ನವದಂಪತಿಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ವಧುವನ್ನು ಗುಂಡು ಹಾರಿಸಿ ಕೊಲೆ ಮಾಡಿ ಆಭರಣ, ನಗದನ್ನು ದೋಚಿ ದಂಪತಿ ಪ್ರಯಾಣಿಸುತ್ತಿದ್ದ ಕಾರಿನಲ್ಲೇ ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 58ರ ಮಟೌರ್ ಎಂಬ ಗ್ರಾಮದಲ್ಲಿ ನಡೆದಿದೆ.

ಮುಝಾಫರ್‌ನಗರದ ಮಿಮ್ಲಾನ ರಸ್ತೆ ಬಳಿಯ ನಿವಾಸಿ ಶಾಜೆಬ್ ಹಾಗೂ ಅವರ ಪತ್ನಿ ಫರ್ಹಾನಾ ತಮ್ಮ ಕುಟುಂಬ ಸದಸ್ಯರೊಂದಿಗೆ ಗಝಿಯಾಬಾದ್‌ಗೆ ತೆರಳಿದ್ದು ಶುಕ್ರವಾರ ರಾತ್ರಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 58ರ ಪಾರ್ತಪುರ ಎಂಬಲ್ಲಿ ರಸ್ತೆ ಬದಿಯ ಡಾಬಾದಲ್ಲಿ ಉಪಾಹಾರ ಸೇವಿಸಿ, ರಾತ್ರಿ 11:00 ಗಂಟೆಯ ವೇಳೆಗೆ ತಮ್ಮ ಪ್ರಯಾಣ ಮುಂದುವರಿಸಿದ್ದರು. ಈ ವೇಳೆ ಕಾರಿನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ನಾಲ್ವರು ದುಷ್ಕರ್ಮಿಗಳು, ಮಟೌರ್ ಗ್ರಾಮದ ಬಳಿ ಕಾರನ್ನು ತಡೆಗಟ್ಟಿದ್ದಾರೆ. ಬಳಿಕ ಬಂದೂಕು ತೋರಿಸಿ ಅವರನ್ನು ಬೆದರಿಸಿ ಆಭರಣ ಹಾಗೂ ಹಣವನ್ನು ನೀಡುವಂತೆ ತಿಳಿಸಿದ್ದಾರೆ.

ಈ ವೇಳೆ ಕಾರಿನಲ್ಲೇ ಕುಳಿತಿದ್ದ ನವವಧು ಫರ್ಹಾನಾರ ಬಳಿಗೆ ಬಂದ ದುಷ್ಕರ್ಮಿಯೋರ್ವ ಆಭರಣ ಬಿಚ್ಚಿಕೊಡುವಂತೆ ಹೇಳಿದಾಗ ಆಕೆ ನಿರಾಕರಿಸಿದ್ದಾಳೆ. ಆಗ ಆಕೆಯ ಮೇಲೆ ಗುಂಡು ಹಾರಿಸಿದಾಗ ಫರ್ಹಾನಾ ಗಾಯಗೊಂಡಿದ್ದು , ಆಕೆಯ ಬಳಿಯಿದ್ದ ಆಭರಣಗಳನ್ನು ಕಿತ್ತುಕೊಂಡು, ಗಂಭೀರ ಗಾಯಗೊಂಡಿದ್ದ ನವವಧುವನ್ನು ಕಾರಿನಿಂದ ಹೊರಗೆಳೆದು ಹಾಕಿ ಅದೇ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ . ತಕ್ಷಣ ಪತಿ ಹಾಗೂ ಕುಟುಂಬದ ಸದಸ್ಯರು ಘಟನೆಯ ಬಗ್ಗೆ ತಮ್ಮ ಬಂಧುಗಳಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ, ಗಾಯಾಳುವನ್ನು ಅಲ್ಲಿಂದ ಸುಮಾರು 25 ಕಿ.ಮೀ. ದೂರಲ್ಲಿರುವ ಮುಝಫರ್‌ನಗರ ಆಸ್ಪತ್ರೆಗೆ ದಾಖಲಿಸಿದರು.

ಆದರೆ ಆ ವೇಳೆಗಾಗಲೇ ಫರ್ಹಾನಾ ಮೃತಪಟ್ಟಿದ್ದರು. ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆ ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಹೆದ್ದಾರಿ ದರೋಡೆಗೆ ಮತ್ತೊಂದು ನಿದರ್ಶನವಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News