ತುಮಕೂರು: ಅಮಿತ್ ಶಾ ರೋಡ್ ಶೋ; ಮಾಜಿ ಸಚಿವ ಎಸ್.ಶಿವಣ್ಣ ಗೈರು

Update: 2018-04-29 18:25 GMT

ತುಮಕೂರು,ಎ.29: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ಸಂಜೆ ನಗರದಲ್ಲಿ ರೋಡ್ ಶೋ ನಡೆಸಿದರು.

ಚಿತ್ರದುರ್ಗದಿಂದ ಹೆಲಿಕಾಪ್ಟರ್ ನಲ್ಲಿ ತುಮಕೂರಿಗೆ ಆಗಮಿಸಿದ ಅಮಿತ್ ಶಾ ಎಸ್.ಐ.ಟಿ. ಕಾಲೇಜಿನ ಬಳಿಯಿಂದ ಎಸ್.ಎಸ್.ಪುರಂನ ನಮ್ಮೂರ ಆಹಾರವರೆಗೆ ಬಿಜೆಪಿ ತುಮಕೂರು ನಗರ ಅಭ್ಯರ್ಥಿ ಜೋತಿ ಗಣೇಶ್, ಗ್ರಾಮಾಂತರ ಅಭ್ಯರ್ಥಿ ಸುರೇಶಗೌಡ ಪರ ಮತಯಾಚನೆ ನಡೆಸಿದರು. ರೋಡ್ ಶೋ ನಲ್ಲಿ ವಿವಿಧ ಜಾನಪದ ಕಲಾ ಪ್ರಕಾರಗಳು ಗಮನ ಸೆಳೆದವು. ಪಟಕುಣಿತ, ಡೊಳ್ಳು ಕುಣಿತ, ನಾಸಿಕ್ ಡೋಲ್, ಗೊರವರ ಕುಣಿತ, ಚಂಡೆವಾಧ್ಯ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಸಾಗಿತು.

ಸುಮಾರು ಒಂದುವರೆ ಕಿ.ಮಿ.ಉದ್ದದ ರೋಡ್ ಶೋ ನಲ್ಲಿ ಎಲ್ಲಿಯೂ ಭಾಷಣ ಮಾಡದೆ ಸಾಗಿದ ಅಮಿತ್ ಶಾ, ರೋಡ್ ಶೋಗೆ ತೆಗೆದುಕೊಂಡಿದ್ದ ಸಮಯ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 7:30ಕ್ಕೆ ನಮ್ಮೂರ ಆಹಾರ ಬಳಿ ವಾಹನ ಇಳಿದು ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದರು.

ಜನರಿಗೆ ತಪ್ಪದ ಕಿರಿಕಿರಿ: ಅಮಿತ್ ಶಾ ರೋಡ್ ಶೋ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ಎಸ್.ಎಸ್.ಪುರಂ ಮೂಲಕ ಸಂಚರಿಸುವ ಎಲ್ಲಾ ವಾಹನಗಳಿಗೆ ಪೊಲೀಸರು ತಡೆಯೊಡ್ಡಿದ್ದರು. ಇದರ ಪರಿಣಾಮ ರಾತ್ರಿ 8 ಗಂಟೆಯವರೆಗೆ ಎಸ್.ಎಸ್.ಪುರಂನ ಸುಮಾರು 14 ಕ್ರಾಸ್ ಮತ್ತು ಎಸ್.ಐ.ಟಿಯ 31 ಕ್ರಾಸ್‍ಗಳ ಜನರು ರಸ್ತೆಯಲ್ಲಿ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಮಾಜಿ ಸಚಿವ ಎಸ್.ಶಿವಣ್ಣ ಗೈರು: ಮಾಜಿ ಸಚಿವ ಎಸ್.ಶಿವಣ್ಣ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷದ ಹಿರಿಯ ಮುಖಂಡರ ಜೊತೆ ಮುನಿಸಿಕೊಂಡಿದ್ದು, ಅದು ಇಂದಿಗೂ ಮುಂದುವರೆದಿತ್ತು. ರೋಡ್ ಶೋಗೆ ಎಸ್.ಶಿವಣ್ಣ ಬಣದ ಕಾರ್ಯಕರ್ತರು ಗೈರು ಹಾಜರಾಗುವ ಮೂಲಕ ರಾಜ್ಯ ಮತ್ತು ರಾಷ್ಟ್ರ ನಾಯಕರ ಮೇಲಿನ ತಮ್ಮ ಮುನಿಸನ್ನು ಮುಂದುವರೆಸಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News