ಜೆಡಿಎಸ್‍ನಲ್ಲಿ ಉಸಿರುಗಟ್ಟುವ ವಾತಾವರಣ: ಕಾಂಗ್ರೆಸ್ ಸೇರ್ಪಡೆಗೊಂಡ ಅಲ್ತಾಫ್ ಹುಸೇನ್

Update: 2018-04-30 11:34 GMT

ಮೂಡಿಗೆರೆ, ಎ.30: ಜೆಡಿಎಸ್‍ನಲ್ಲಿ ಉಸಿರುಗಟ್ಟುವ ವಾತಾವರಣ ಇರುವುದರಿಂದ ಬೇಸತ್ತು ಮರಳಿ ತನ್ನ ಹಳೆಯ ಮನೆ ಕಾಂಗ್ರೆಸ್‍ಗೆ ಪ್ರವೇಶ ಮಾಡಿರುವುದಾಗಿ ಭಾನುವಾರ ಜೆಡಿಎಸ್ ತೊರೆದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಪಪಂ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಅಲ್ತಾಫ್ ಹುಸೇನ್ ತಿಳಿಸಿದರು.

ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಗರಣ ರಹಿತವಾಗಿ ಉತ್ತಮವಾಗಿ ಆಡಳಿತ ನಡೆಸಿದೆ. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿರುವ ಜೊತೆಗೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಿಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಸರ್ಕಾರದ ನಂತರ ಸಿದ್ದರಾಮಯ್ಯ ಅವರೇ ದೇಶದಲ್ಲೇ ನಂ.1 ಮುಖ್ಯಮಂತ್ರಿಯಾಗಿ, ಸರ್ವಜನರ ಅಭಿವೃದ್ಧಿಗೆ ಯೋಜನೆ ತಯಾರಿಸಿದ್ದಾರೆ. ಇದರಿಂದ ಪ್ರೇರಿತಗೊಂಡು ತಾನು ಹಿಂದೆ ಇದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು. 

ಜೆಡಿಎಸ್‍ನಲ್ಲಿ ಹೇಳುವುದು ಒಂದು, ಮಾಡುವುದು ಇನ್ನೊಂದು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಈಗಲೇ ತಯಾರಿ ನಡೆಸುತ್ತಿದ್ದಾರೆ. ಬಿಜೆಪಿಯೊಂದಿಗೆ ಕೂಡಿ ಅಧಿಕಾರ ನಡೆಸಲು ತಯಾರಿ ನಡೆಸಿರುವ ಕುಮಾರಸ್ವಾಮಿಯವರನ್ನು ಅಲ್ಪಸಂಖ್ಯಾತರು ನಂಬುವುದಾದರೂ ಹೇಗೆ? ಜೆಡಿಎಸ್‍ನಲ್ಲಿ ಕಾರ್ಯಕರ್ತರಿಗೆ ಬೆಲೆಯೇ ಇಲ್ಲ. ಹಾಗಾಗಿ ಜೆಡಿಎಸ್ ಕಾರ್ಯಕರ್ತರು ಆ ಪಕ್ಷವನ್ನು ತೊರೆದು ಕಾಂಗ್ರೆಸ್‍ನತ್ತ ಮುಖ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಅವರು ಭಾರೀ ಅಂತರದ ಗೆಲುವು ಕಾಣಲಿದ್ದಾರೆ. ಪ್ರತಿಸ್ಪರ್ಧಿಯಾಗಿ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಅವರು ಇನ್ನೂ ಪ್ರಚಾರವನ್ನೇ ಪ್ರಾರಂಭಿಸಿಲ್ಲ. ಹಾಗಾಗಿ ಆ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News