ಅನಂತ್ ಕುಮಾರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿದ ಜೈನರು

Update: 2018-04-30 12:40 GMT

ಕಿತ್ತೂರು, ಎ.30: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಟೀಕಿಸುವ ಭರದಲ್ಲಿ ಪರೋಕ್ಷವಾಗಿ ಶ್ರವಣಬೆಳಗೊಳವನ್ನು ಅಪಹಾಸ್ಯ ಮಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಜೈನ ಸಮುದಾಯದವರು ಆಕ್ರೋಶವನ್ನು ಹೊರ ಹಾಕಿದ್ದಾರೆ.

ಕಿತ್ತೂರು ಬಳಿಯ ತಿಗಡೊಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಜೈನ ಸಮುದಾಯದ ಮಂದಿ ಅನಂತ್ ಕುಮಾರ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಜೈನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇದೇ ಸಂದರ್ಭ ಕಿತ್ತೂರು ತಹಶೀಲಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ರವಿವಾರ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅನಂತ್ ಕುಮಾರ್ ಹೆಗಡೆ, “ರಾಹುಲ್ ಗಾಂಧಿಗೆ ದೇಶದಲ್ಲಿ ಹಿಂದೂ ಧರ್ಮವಿದೆ ಎಂಬುದು ಇದೀಗ ಗೊತ್ತಾಗಿದೆ. ಹೀಗಾಗಿ ಅವರು ಮಠ, ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ಯಾರೋ ಹೇಳಿದರು ಎಂದು ಕಾವಿ ತೊಟ್ಟು ದೇಗುಲಕ್ಕೆ ಹೋದ, ಮಠಕ್ಕೆ ಹೋಗುವಾಗ ರುದ್ರಾಕ್ಷಿ ಧರಿಸಿಕೊಂಡ, ಮಸೀದಿಗೆ ಕೋಳಿಪುಕ್ಕ ಹಾಕಿಕೊಂಡು ಹೋದ, ಚರ್ಚ್‌ಗೆ ಕೊರಳಲ್ಲಿ ಶಿಲುಬೆ ಕಟ್ಟಿಕೊಂಡು ಹೋದ ರಾಹುಲ್ ಗೆ ದೇವಸ್ಥಾನದಲ್ಲಿ ಕೊಟ್ಟ ತೀರ್ಥ ಹೇಗೆ ಸೇವಿಸಬೇಕೆಂದು  ಗೊತ್ತಿಲ್ಲ. ರಾಹುಲ್ ಗಾಂಧಿಗೆ ನಾನು ಹೇಳುತ್ತೇನೆ, ನಮ್ಮ ದೇಶದ ಅತ್ಯಂತ ದೊಡ್ಡ ಶ್ರದ್ಧಾಕೇಂದ್ರ ಶ್ರವಣಬೆಳಗೊಳಕ್ಕೂ ಹೋಗಿಬನ್ನಿ ಎಂದು ಹೇಳುವ ಮೂಲಕ ಬಟ್ಟೆಯಿಲ್ಲದೆ ಹೋಗಿ ಎಂದು ಹೇಳಿದರು.

ಸಚಿವರ ಈ ಮಾತುಗಳು ಭಾರೀ ವಿವಾದವನ್ನು ಸೃಷ್ಟಿಸಿತ್ತಲ್ಲದೆ, ಜೈನ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News