ಚಿಕ್ಕಮಗಳೂರು: ಒಂದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲೆಯ ಮೊದಲ 3 ಸ್ಥಾನ

Update: 2018-04-30 18:01 GMT

ಚಿಕ್ಕಮಗಳೂರು, ಎ.30: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಿರಿಗಾಪುರ ಶ್ರೀ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಕೆ.ಆರ್.ಅನನ್ಯಾ 600ಕ್ಕೆ 586 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಜಿಲ್ಲೆಯ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನೂ ಈ ಬಾರಿ ಕಾಲೇಜಿನ ವಿದ್ಯಾರ್ಥಿಗಳೇ ಪಡೆದಿರುವುದು ವಿಶೇಷ. ಇದು ಸಂತೋಷ ತಂದಿದೆ ಎಂದು ಮುಖ್ಯ ಪ್ರಾಂಶುಪಾಲೆ ವಿಜಯಾ ನಾಗೇಶ್ ಹೇಳಿದರು.

ಅನನ್ಯಾ ಅವರು ಕನ್ನಡ/ಹಿಂದಿ 96, ಇಂಗ್ಲೀಷ್ 92, ಭೌತಶಾಸ್ತ್ರ 99, ಗಣಿತ 99, ರಸಾಯನ ಶಾಸ್ತ್ರ ಹಾಗೂ ಐಚ್ಛಿಕ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ. ಸಿ.ಆರ್.ಭೂಮಿಕಾ 585 ಹಾಗೂ ಜುನೈದ್‍ಖಾನ್ 583 ಅಂಕ ಪಡೆದು ಜಿಲ್ಲೆಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ಸುಮುಖ್ ಮೌದ್ಗಲ್ಯ 582, ಎಸ್.ಕೆ. ಪೃತ್ವಿಶ್ರೀ 580, ಎಸ್.ಎನ್.ಸಾತ್ವಿಕ್ 580 ,ಸಿ.ಬಿ.ಸಂಜಯ್ 579, ಐ.ಪಿ.ಸಂಚಯಾ 578 ,ಸಿ.ವಿದ್ಯಾ 577, ಎಸ್.ಪುರುಶೋತ್ತಮ 576 ಅಂಕಗಳನ್ನು ಪಡೆದಿದ್ದಾರೆ.

ಜುನೈದ್‍ ಖಾನ್ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಕಾಲೇಜಿನಲ್ಲಿ 255 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 120 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 126 ಪ್ರಥಮಶ್ರೇಣಿ, 5 ದ್ವಿತೀಯ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.

ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ ಅನನ್ಯಾ ಪೋಷಕರಾದ ರವಿಪ್ರಸಾದ್ ಹಾಗೂ ವಾಸುಕಿ ದಂಪತಿ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಮುಖ್ಯ ಪ್ರಾಂಶುಪಾಲೆ ವಿಜಯಾನಾಗೇಶ್ ಮಾತನಾಡಿ, ಪ್ರತೀ ವರ್ಷಕ್ಕಿಂತ ಈ ಬಾರಿ ಹೆಚ್ಚು ಸಂತೋಷ ತರುವ ಜೊತೆ ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯ ಜವಾಬ್ದಾರಿಯನ್ನು ಹೆಚ್ಚಿಸಿದೆ. ಏಕೆಂದರೆ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಸಂಪೂರ್ಣ ನಮ್ಮ ಕಾಲೇಜು ವಿದ್ಯಾರ್ಥಿಗಳೆ ಪಡೆದಿರುವುದು ತುಂಬಾ ಸಂತೋಷದ ವಿಷಯ ಎಂದರು. 

ಟಾಪರ್ ಕೆ.ಆರ್.ಅನನ್ಯ ಮಾತನಾಡಿ, ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್ ಹಾಗೂ ಎಲ್ಲಾ ಉಪನ್ಯಾಸಕರ ಹಾಗೂ ಆಡಳಿತ ಮಂಡಳಿ ಯವರ ಪ್ರೋತ್ಸಾಹ ಮತ್ತು ಉತ್ತೇಜನ ನನಗೆ ಈ ಅಂಕಗಳಿಸಲು ಸಹಕಾರಿಯಾಯಿತು. ಪೋಷಕರು ಸಹ ಎಲ್ಲಾ ರೀತಿ ಸಹಕಾರ ನೀಡಿದ್ದರು ಎಂದರು.
ಪ್ರಾಂಶುಪಾಲ ನಾಗರಾಜ್ ಹಾಗೂ ಉಪನ್ಯಾಸಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News