ಗೌರಿ ನೋಟ ನಾಡು ಕಂಡಂತೆ....

Update: 2018-04-30 18:29 GMT

ಗೌರಿ ಹತ್ಯೆಯ ಬಳಿಕದ ಕರ್ನಾಟಕ ಬೇರೆ ಬೇರೆ ಕಾರಣಗಳಿಂದ ಗಮನ ಸೆಳೆಯುತ್ತಿದೆ. ಗೌರಿಯವರ ಹತ್ಯೆ ಚದುರಿಹೋದ ಹೊಸತಲೆಮಾರನ್ನು ಒಟ್ಟು ಸೇರಿಸಿತು. ಗೌರಿಯ ವರ ನೆನಪುಗಳನ್ನು ಮುಂದಿಟ್ಟುಕೊಂಡು ಹೊಸ ಹೋರಾಟವೊಂದು ರಾಜ್ಯಾದ್ಯಂತ ಆರಂಭವಾಯಿತು. ಒಬ್ಬ ಗೌರಿಯನ್ನು ಕೊಲ್ಲಲು ಹೊರಟವರು ಸಾವಿರಾರು ಗೌರಿಯರ ಸೃಷ್ಟಿಗೆ ಕಾರಣರಾದರು. ಗೌರಿಯ ನೆನಪುಗಳು ಬೇರೆ ಬೇರೆ ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತಿವೆ. ವಿವಿಧ ಪತ್ರಿಕೆಗಳಲ್ಲಿ ಗೌರಿಯ ಚಿಂತನೆಗಳು ಬೆಳಕು ಕಂಡವು. ಗೌರಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒಂದು ಹೋರಾಟದ ರೂಪದಲ್ಲಿ ಇಂದು ಚರ್ಚೆಯಾಗುತ್ತಿದ್ದಾರೆ. ಇದೀಗ ಗೌರಿಯವರ ಬಗ್ಗೆ ಬಂದಿರುವ ಈವರೆಗಿನ ಲೇಖನಗಳನ್ನು ಒಟ್ಟು ಸೇರಿಸಿ ‘ಗೌರಿ ನೋಟ’ ಎಂಬ ಅಪರೂಪದ ಕೃತಿಯನ್ನು ಲಡಾಯಿ ಪ್ರಕಾಶನ ಹೊರತಂದಿದೆ. ಬಸೂ ಮತ್ತು ಪಂಪಾರೆಡ್ಡಿ ಅರಳಹಳ್ಳಿ ಅವರ ಸಂಪಾದಕತ್ವದಲ್ಲಿ ಗೌರಿ ಲಂಕೇಶ್ ಅವರ ಒಡನಾಟ, ನೆನಪುಗಳನ್ನು ಹಂಚಿಕೊಂಡ ಲೇಖನಗಳು ಇಲ್ಲಿ ಒಂದಾಗಿವೆ. ಕವಿತಾ ಲಂಕೇಶ್ ಅವರ ಕವಿತೆಯ ಜೊತೆಗೇ ಈ ಬೃಹತ್ ಕೃತಿ ಹೃದ್ಯವಾಗಿ ತೆರೆದುಕೊಳ್ಳುತ್ತದೆ. ಇಲ್ಲಿರುವ ಎಲ್ಲ ಲೇಖನಗಳನ್ನು ಬರೇ ಗೌರಿಗೆ ಸಂಬಂಧಿಸಿದ ಲೇಖನಗಳು ಎನ್ನುವಂತಿಲ್ಲ. ಗೌರಿಯ ನೆಪದಲ್ಲಿ ವರ್ತಮಾನವನ್ನು ಬೇರೆ ಬೇರೆ ಲೇಖಕರು ಚರ್ಚಿಸಿದ್ದಾರೆ. ಕೃತಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗ ಗೌರಿಯ ವೈಯಕ್ತಿಕ ಬದುಕಿಗೆ ಮತ್ತು ಅವರ ಬೆಳವಣಿಗೆಗೆ ಸಂಬಂಧಿಸಿದ್ದು. ಗೌರಿಯ ಕುರಿತಂತೆ ಇಂದಿರಾ ಲಂಕೇಶ್ ಬರೆದ ಲೇಖನ ಹೃದಯಸ್ಪರ್ಶಿಯಾಗಿದೆ. ಅವರ ಬಾಲ್ಯ, ಪ್ರೇಮ, ಪ್ರಣಯ, ಪರಿಣಯ ಎಲ್ಲವನ್ನು ತಾಯಿ ಮನಸ್ಸಿನಿಂದ ಕಟ್ಟಿಕೊಂಡಿದ್ದಾರೆ. ಹಾಗೆಯೇ ಚಿದಾನಂದ ರಾಜ್ ಘಟ್ಟ ಅವರ ‘ಇತಿಹಾಸವಾದ ರೆಬೆಲ್ ಹುಡುಗಿ’ ಕೂಡ ಮಹತ್ವದ ಲೇಖನ. ಗೌರಿ ಮತ್ತು ಚಿದಾನಂದ ಅವರು ಪತ್ರಕರ್ತರು ಮಾತ್ರವಲ್ಲ, ಪ್ರೇಮಿಸಿ ಮದುವೆಯಾದರು. ಬಳಿಕ ವಿಚ್ಛೇದನಗೊಂಡವರು. ಆ ಬಳಿಕವೂ ಒಂದು ಆತ್ಮೀಯ ಸಂಬಂಧವನ್ನು ಇಟ್ಟುಕೊಂಡವರು. ಗೌರಿಯ ಕುರಿತಂತೆ ರಾಜ್‌ಘಟ್ಟ ಅವರು ಬರೆಯುವ ಸಾಲುಗಳು ಹೃದಯವನ್ನು ದ್ರವಾಗಿಸುತ್ತದೆ. ಹಾಗೆಯೇ ಕವಿತಾ ಲಂಕೇಶ್ ಅವರ ಬರಹವೂ ಅಷ್ಟೇ ಆತ್ಮೀಯವಾಗಿದೆ. ಉಳಿದಂತೆ ಶ್ರೀನಿವಾಸ ಕಾರ್ಕಳ, ಯೋಗೇಶ್ ಮಾಸ್ಟರ್, ದಿನೇಶ್ ಅಮೀನ್ ಮಟ್ಟು ಮೊದಲಾದವರು ಗೌರಿಯ ಕುರಿತ ಒಡನಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಎರಡನೆ ಅಧ್ಯಾಯಕ್ಕೆ ‘ಗೌರಿ ಲಂಕೇಶ್ ಹತ್ಯೆಯ ಆಚೀಚೆ’ ಎಂದು ಹೆಸರಿಡಲಾಗಿದೆ. ಗೌರಿಯ ಹತ್ಯೆಯ ಹಿನ್ನೆಲೆ, ಮುನ್ನೆಲೆ ಗಳನ್ನು ಇಲ್ಲಿ ಬೇರೆ ಬೇರೆ ಲೇಖಕರು ಚರ್ಚಿಸಿದ್ದಾರೆ. ಇಂಗ್ಲಿಷ್‌ನ ಅನುವಾದಿತ ಲೇಖನಗಳನ್ನೂ ಈ ಅಧ್ಯಾಯ ಹೊಂದಿದೆ. ಮೂರನೇ ಭಾಗದಲ್ಲಿ ಗೌರಿಲಂಕೇಶರ ಆಯ್ದ ಬರಹಗಳನ್ನು ನೀಡಲಾಗಿದೆ. ನಾಲ್ಕನೇ ಅಧ್ಯಾಯದಲ್ಲಿ ಗೌರಿಯವರ ಕುರಿತಂತೆ ಬರೆದ ಒಂಬತ್ತು ಕವಿತೆಗಳಿವೆ. ಗೌರಿಗೆ ಸಂಬಂಧಿಸಿ ಮಾತ್ರವಲ್ಲ, ಒಂದು ಒಳ್ಳೆಯ ಭವಿಷ್ಯವನ್ನು ಕಟ್ಟುವ ದೃಷ್ಟಿಯಿಂದ ರೂಪುಗೊಂಡ ಮಹತ್ವದ ಕೃತಿ ಇದಾಗಿದೆ. ಸುಮಾರು 376 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - - ಕಾರುಣ್ಯ

contributor

Editor - - ಕಾರುಣ್ಯ

contributor

Similar News