ಪ್ರಧಾನಿ ಹೊಗಳಿಕೆಯ ಬಗ್ಗೆ ಎಚ್.ಡಿ. ದೇವೇಗೌಡ ಪ್ರತಿಕ್ರಿಯಿಸಿದ್ದು ಹೀಗೆ...

Update: 2018-05-02 12:48 GMT

ಬೆಂಗಳೂರು, ಮೇ 2: ಉಡುಪಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ರಾಜ್ಯದ ವಾಸ್ತವ ಸ್ಥಿತಿ ಅರಿತು ಮಾಜಿ ಪ್ರಧಾನಿಗೆ ಗೌರವ ಕೊಡುವುದಾಗಿ ಹೇಳಿದ್ದಾರೆ. ಅದರಲ್ಲಿ ಯಾವುದೇ ರಾಜಕೀಯವಿಲ್ಲ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಸರಕಾರ ರಚಿಸಲಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ವರದಿಗಾರರಕೂಟ ವತಿಯಿಂದ ಆಯೋಜಿಸಿದ್ದ ಮಾತು ಮಂಥನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ರಾವ್ ಹಾಗೂ ಸಂಸದ ಅಸದುದ್ದೀನ್ ಉವೈಸಿ ಜೆಡಿಎಸ್‌ಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಜೆಡಿಎಸ್ ಕುರಿತು ಜನರಲ್ಲಿ ಒಳ್ಳೆಯ ಭಾವೆನೆಯಿದ್ದು, ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ರಾಹುಲ್‌ಗಾಂಧಿ ಇನ್ನೂ ಚಿಕ್ಕವರು: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬಗ್ಗೆ ನಾನೇನು ಮಾತನಾಡುವುದಿಲ್ಲ. ಅವರು ಇನ್ನೂ ಚಿಕ್ಕವರು, ಬೆಳೆಯಬೇಕು. ಇತ್ತೀಚೆಗೆ ನಮ್ಮ ಜಿಲ್ಲೆಗೆ ಬಂದು ‘ಕಮ್ ಕ್ಲೀನ್’ ಎಂದಿದ್ದರು. ಈ ಕುರಿತು ಪ್ರಧಾನಿ ಮೋದಿ ಗಮನಿಸಿರುತ್ತಾರೆ. ಅವರು ಮಾಜಿ ಪ್ರಧಾನಿ ಎಂಬ ಉದ್ದೇಶದಿಂದ ಗೌರವದಿಂದ ಮಾತನಾಡಿರುತ್ತಾರೆ ಎಂದು ಹೇಳಿದರು.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 48 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು-ಎರಡು ಸಾವಿರಗಳ ಮತಗಳ ಅಂತರದಿಂದ ಸೋತಿದ್ದೇವೆ. ಅಂತಹ ಕಡೆಗಳಲ್ಲಿ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಬಿಎಸ್ಪಿಯೊಂದಿಗೆ ವೆುತ್ರಿ ಮಾಡಿಕೊಳ್ಳಲಾಗಿದೆ. ಅವರಿಗೆ 20 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಈ ಮೈತ್ರಿ ಮುಂದಿನ ಲೋಕಸಭಾ ಚುನಾವಣೆವರೆಗೂ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ, ಗುಂಡೂರಾವ್, ಬಂಗಾರಪ್ಪ, ರಾಮಕೃಷ್ಣಹೆಗಡೆ, ಬಿ.ಎಸ್.ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟಿದರೂ ಯಶಸ್ವಿಯಾಗಲಿಲ್ಲ ಎಂದ ಅವರು, ಈ ಚುನಾವಣೆ ಎರಡು ರಾಷ್ಟ್ರೀಯ ಮತ್ತು ಒಂದು ಪ್ರಾದೇಶಿಕ ಪಕ್ಷಗಳ ನಡುವೆ ನಡೆಯುತ್ತಿರುವ ಹೋರಾಟವಾಗಿದ್ದು, ರಾಷ್ಟ್ರೀಯ ಪಕ್ಷಗಳು ಸೋಲಲಿದ್ದು, ಪ್ರಾದೇಶಿಕ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಸಿಎಂ ವಿರುದ್ಧ ಕಿಡಿ: ಕನ್ನಡಿಗನಾದ ನಾನು ಪ್ರಧಾನಿಯಾದಾಗ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ನಿವಾಸ ಹಾಗೂ ಕಚೇರಿಯಲ್ಲಿ ನನ್ನ ಭಾವಚಿತ್ರ ಹಾಕಿದ್ದರು. ಅನಂತರ ಮುಖ್ಯಮಂತ್ರಿಯಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಯಾರೂ ಅದನ್ನು ತೆಗೆಸಲಿಲ್ಲ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಅದನ್ನು ಹೊರ ಹಾಕಿಸಿದರು ಎಂದ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ನಾಡಿನವರು ಪ್ರಧಾನಿಯಾಗಿದ್ದ ಬಗ್ಗೆ ಗೌರವ ಕೊಡುವ ಸೌಜನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಲ್ಲ. ಉಡುಪಿಯಲ್ಲಿ ಪ್ರಧಾನಿ ದೇವೇಗೌಡ ನಮ್ಮ ಮನೆಗೆ ಬಂದರೆ ಬಾಗಿಲು ತೆರೆಯುತ್ತೇನೆ ಎಂದು ಹೇಳಿರುವುದನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದ ಅವರು, ಪ್ರಧಾನಿಯಾಗಿ ಒಂದು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದನ್ನು ಅರಿತಿರುತ್ತಾರೆ. ಕಳೆದ 2 ತಿಂಗಳಿನಿಂದಲೂ ಜೆಡಿಎಸ್ ಹಾಗೂ ಬಿಜೆಪಿ ಬಗ್ಗೆ ಮುಖ್ಯಮಂತ್ರಿ ಮಾಡುತ್ತಿರುವ ಟೀಕೆಗಳನ್ನು ಪ್ರಧಾನಿ ಗಮನಿಸಿರುತ್ತಾರೆ. ಅಲ್ಲದೆ, ಅದನ್ನು ಆಧರಿಸಿ ನನ್ನ ಕುರಿತು ಮಾತನಾಡಿದ್ದಾರೆ ಎಂದರು.

ಪುತ್ರ ವ್ಯಾಮೋಹವಿಲ್ಲ: ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದೇ ನನ್ನ ಕೊನೆಯ ಆಸೆ ಎಂದಿದ್ದೀರಾ, ಇದು ಪುತ್ರ ವ್ಯಾಮೋಹ ಅಥವಾ ಅಧಿಕಾರದ ಆಸೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪುತ್ರ ವ್ಯಾಮೋಹದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿಲ್ಲ. ಪ್ರಾದೇಶಿಕ ಪಕ್ಷವನ್ನು ಉಳಿಸುವ ಉದ್ದೇಶದಿಂದ ಬಯಸುತ್ತಿದ್ದೇನೆ ಎಂದ ದೇವೇಗೌಡರು, ಸಿದ್ದರಾಮಯ್ಯ ಜೆಡಿಎಸ್‌ನ ರಾಜ್ಯಾಧ್ಯಕ್ಷರಾಗಿರಲಿಲ್ಲವಾ, ಎ.ಕೃಷ್ಣಪ್ಪ, ಮೀರಾಜುದ್ದೀನ್ ಪಟೇಲ್ ಜೆಡಿಎಸ್ ಅಧ್ಯಕ್ಷರಾಗಿರಲಿಲ್ಲವೇ? ಇವೆಲ್ಲ ಪುತ್ರ ವ್ಯಾಮೋಹವೇ ಎಂದು ಪ್ರಶ್ನಿಸಿದರು.

ಬಿಜೆಪಿ ಪಕ್ಷ ಸ್ವಂತವಾಗಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾದರೆ ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ. ಆ ಸಂಬಂಧ ರಾಜೀನಾಮೆ ಸಲ್ಲಿಸಲು ಹೋಗಿದ್ದ ಸಂದರ್ಭದಲ್ಲಿ ಮೋದಿ ನಿಮ್ಮ ಅನುಭವ ನಮಗೆ ಬೇಕಾಗಿದೆ. ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿದರು. ಅದರ ಪ್ರಕಾರ ನಾನು ರಾಜೀನಾಮೆಯನ್ನು ನೀಡಲಿಲ್ಲ ಹಾಗೂ ಅದು ನಮ್ಮಿಬ್ಬರ ಮೊದಲ ಭೇಟಿಯಾದ ಸಂದರ್ಭ ಎಂದು ಅವರು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News