ಮಡಿಕೇರಿ: ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಂದ ಬೆಳೆಗಾರರಿಗೆ ಮಾಹಿತಿ ಕಾರ್ಯಗಾರ

Update: 2018-05-02 11:51 GMT

ಮಡಿಕೇರಿ,ಮೇ.01: ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಕಾಫಿ ಬೆಳೆಗಾರ ಸದಸ್ಯರಿಗೆ ಜಿಲ್ಲೆಯ ಎರಡು ಪ್ರಮುಖ ಕಾಫಿ ಸಂಸ್ಕರಣಾ ಘಟಕಗಳಿಗೆ ಅಧ್ಯಯನ ಭೇಟಿಯನ್ನು ಆಯೋಜಿಸಲಾಗಿತ್ತು. 40 ಬೆಳೆಗಾರ ಸದಸ್ಯರು ಪಾಲ್ಗೊಂಡಿದ್ದರು.

ಮೊದಲು ಕುಶಾಲನಗರದ ಯೂನೈಟೆಡ್ ಕಾಫಿ ಕ್ಯೂರಿಂಗ್ ವರ್ಕ್ಸ್ ಗೆ ಭೇಟಿ ನೀಡಲಾಯಿತು. ವಿದೇಶಗಳಿಂದ ಆಮದಾದ ಅತೀ ನವೀನ ಮಾದರಿಯ ಬಗೆ ಬಗೆಯ ಕಾಫಿ ಹುರಿಯುವ ಮತ್ತು ಹರೆಯುವ ಯಂತ್ರ, ಕಾಫಿ ತಯಾರಿಸುವ ಯಂತ್ರ, ಕಾಫಿ ಪುಡಿ ಪ್ಯಾಕ್ ಮಾಡುವ ಯಂತ್ರ, ಕಾಫಿ ರುಚಿನೋಡುವ ಪ್ರಯೋಗಾಲಯ ಮುಂತಾದ ಸೌಲಭ್ಯಗಳನ್ನು ಈ ಘಟಕ ಒಳಗೊಂಡಿದೆ. ಘಟಕದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸಾವನ್ ಮುತ್ತಣ್ಣ  ಯಂತ್ರಗಳ ಮಾಹಿತಿ, ಕಾಫಿ ಹುರಿಯುವ ಮತ್ತು ಹರೆಯುವ ವಿಧಾನ, ಅನುಸರಿಸಬೇಕಾದ ನಿಯಮ ಮತ್ತು ಮುನ್ನೆಚ್ಚರಿಕೆಗಳು, ವಿವಿದ ವರ್ಗ ಮತ್ತು ಶ್ರೇಣಿಯ ಕಾಫಿಗಳ ಮಿಶ್ರಣದ ಪ್ರಮಾಣ, ಕಾಫಿ ಮತ್ತು ಚಿಕೋರಿ ಮಿಶ್ರಣದ ಪ್ರಮಾಣ, ಕಾಫಿ ರುಚಿ ನೋಡುವ ವಿಧಾನ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. 

ಬೆಳೆಗಾರರು ಹೇಗೆ ತಮ್ಮ ಕಾಫಿಯನ್ನು ವಿಶೇಷವಾಗಿ ತಯಾರಿಸಬಹುದು ಮತ್ತು ಅದನ್ನು ತಮ್ಮ ತೋಟದ ಹೆಸರಿನಲ್ಲೇ ಸ್ವದೇಶ ಮತ್ತು ವಿದೇಶಗಳ ಗ್ರಾಹಕರಿಗೆ ಮಾರಾಟಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂಬ ಬಗ್ಗೆ  ಸಾವನ್ ಮುತ್ತಣ್ಣ ವಿವರಿಸಿದರು. ಈ ಘಟಕದಲ್ಲಿ ತಯಾರಾದ ಕಾಫಿ ಪುಡಿಯು ಹೆಚ್ಚಾಗಿ ವಿದೇಶಗಳಿಗೆ ರಪ್ತಾಗುತ್ತದೆ. ಆಸ್ಟ್ರೇಲಿಯಾದ ಒರಿಜಿನ್ ಕಾಫಿ ಸಂಸ್ಥೆಯು ತಮ್ಮೆಲ್ಲಾ  ಬೇಡಿಕೆಗಳನ್ನು ಈ ಘಟಕದಿಂದಲೇ ತರಿಸಿಕೊಳ್ಳುತ್ತದೆ.

ಕುಶಾಲನಗರದ ಇನ್ನೊಂದು ಪ್ರಖ್ಯಾತ ಕಾಫಿ ಸಂಸ್ಕರಣಾ ಘಟಕವಾದ ಟ್ರಾವಂಕೂರು ಕಾಫಿ ಕಂಪನಿಗೆ ಬೆಳೆಗಾರರ ತಂಡ ಭೇಟಿ ನೀಡಿತು. ಫಯಾಜ್ ಮೂಸಕುಟ್ಟಿ ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಪ್ರತಿಷ್ಟಿತ ಐ.ಟಿ.ಸಿ. ಸಂಸ್ಥೆಯ ಸಂಪೂರ್ಣ ಕಾಫಿ ದಾಸ್ತಾನನ್ನು ಇಲ್ಲೇ ಸಂಸ್ಕರಣೆ ಮಾಡುತ್ತದೆ. ಈ ಘಟಕದ ಉತ್ಪಾದನಾ ವ್ಯವಸ್ಥಾಪಕ ಕೆ.ಕೆ.ರಾಜನ್  ಕಾಫಿ ಸಂಸ್ಕರಣೆಯ ವಿವಿದ ಹಂತಗಳ ಬಗ್ಗೆ ವಿವರಿಸಿದರು. ಸದಸ್ಯರನ್ನು ಸಂಸ್ಕರಣೆಯ ವಿವಿದ ಘಟ್ಟಗಳಿಗೆ ಕರೆದೊಯ್ದು ವಿವಿಧ ಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು. ಕಾಫಿಯ ವರ್ಗೀಕರಣ ಮತ್ತು ಅವುಗಳ ಬ್ಯಾಗಿಂಗ್ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು.

ಈ ಕಾಫಿ ಸಂಸ್ಕರಣಾ ಘಟಕಗಳ ಅಧ್ಯಯನ  ಭೇಟಿಯು ಜಿಲ್ಲೆಯ ಬೆಳೆಗಾರರಿಗೆ ವಿನೂತನ ಅನುಭವ ನೀಡಿತ್ತು. ತಮ್ಮ ತೋಟಗಳಲ್ಲಿ ಕಾಫಿಯ ಗುಣಮಟ್ಟವನ್ನು ಸುಧಾರಿಸಿ, ಹೆಚ್ಚಿನ ಆಧಾಯಗಳಿಸುವಲ್ಲಿ ಸಹಕಾರಿಯಾಗುವಲ್ಲಿ ಅಧ್ಯಯನ ಭೇಟಿ ಕಾರಣವಾಯಿತು. 

ಜಿಲ್ಲೆಯ ಹಿರಿಯ ಬೆಳೆಗಾರರಾದ ಕೂತಂಡ ಉತ್ತಪ್ಪ ಮತ್ತು ಪ್ರತಿಷ್ಟಿತ  ಟಾಟಾ ಕಾಫಿ ಮತ್ತು ಬಿ.ಬಿ.ಟಿ.ಸಿ.ಸಂಸ್ಥೆಗಳಿಂದ ಅಧಿಕ ಸಂಖ್ಯೆಯಲ್ಲಿ ತೋಟದ ಉತ್ಪಾದನಾ ವ್ಯವಸ್ಥಾಪಕರು ಪಾಲ್ಗೊಂಡಿದ್ದರು ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಿ.ಎಂ.ಬೋಪಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಷ್ಟಿತ  ಟಾಟಾ ವೆಹಿಕಲ್ ಮತ್ತು ಕಾಂಪೌಂಡಸ್ ಕಂಪನಿ ವತಿಯಿಂದ ಮಿನಿಶಕ್ತಿ ಅನ್ನುವ ಉತ್ಪನ್ನದ ಬಗ್ಗೆ ಕಂಪನಿಯ ಮಾರಾಟ ಅಧಿಕಾರಿ ಅಕಿಲೇಶ್ ಶುಕ್ಲ ಬೆಳೆಗಾರರಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News