ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ತೃಪ್ತಿ ತಂದಿಲ್ಲ: ಸಿಬಿಐಗೆ ಹೈಕೋರ್ಟ್ ತರಾಟೆ

Update: 2018-05-02 14:23 GMT

ಅಲಹಾಬಾದ್,ಮೇ 2: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ತನಿಖಾ ವೈಖರಿಗಾಗಿ ಸಿಬಿಐ ಅನ್ನು ಬುಧವಾರ ತೀವ್ರ ತರಾಟೆಗೆತ್ತಿಕೊಂಡಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು,ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ಅದು ತಪ್ಪೆಸಗಿದೆ ಎಂದು ಬೆಟ್ಟು ಮಾಡಿದೆ.

ಪ್ರಕರಣದಲ್ಲಿ ಪ್ರಗತಿಯು ನಮಗೆ ತೃಪ್ತಿಯನ್ನುಂಟು ಮಾಡಿಲ್ಲ. ನೀವು ಏನು ಮಾಡುತ್ತಿದ್ದೀರಿ ಎನ್ನುವುದನ್ನು ತಿಳಿಯಲೆಂದೇ ನಾವು ಸ್ಥಿತಿಗತಿ ವರದಿಯನ್ನು ಕೇಳಿದ್ದೆವು. ಮುಂದುವರಿಯಲು ನಮ್ಮ ಆದೇಶಕ್ಕಾಗಿ ನೀವೇಕೆ ಕಾಯುತ್ತಿದ್ದೀರಿ?, ನಿಮಗಿರುವ ಅಧಿಕಾರವನ್ನು ಬಳಸಿಕೊಂಡು ನೀವೇನನ್ನು ಮಾಡಬಹುದೋ ಅದನ್ನು ಮಾಡಿ. ತನಿಖೆಯ ಪ್ರತಿಯೊಂದು ಹಂತದಲ್ಲಿಯೂ ನ್ಯಾಯಾಲಯವು ನಿಮಗೆ ನಿರ್ದೇಶ ನೀಡಲು ಸಾಧ್ಯವಿಲ್ಲ ಎಂದು ಸಿಬಿಐ ಪರ ವಕೀಲರಿಗೆ ಪೀಠವು ತಿಳಿಸಿತು.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ರಾಜ್ಯದಲ್ಲಿಯ ಬಿಜೆಪಿ ಸರಕಾರವು ರಕ್ಷಣೆ ನೀಡುತ್ತದೆ ಎಂಬ ಆರೋಪಗಳ ಬಳಿಕ ಎ.12ರಂದು ಸಿಬಿಐ ಉತ್ತರ ಪ್ರದೇಶ ಪೊಲೀಸರಿಂದ ಪ್ರಕರಣವನ್ನು ಹಸ್ತಾಂತರಿಸಿಕೊಂಡಿತ್ತು.

ಬುಧವಾರ ಸಿಬಿಐ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು,ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ನಿಗದಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News