ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ: ಎಐಸಿಸಿ ಮುಖಂಡ ಪಲ್ಲಂರಾಜು

Update: 2018-05-02 16:57 GMT

ತುಮಕೂರು,ಮೇ.02: ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನೀಡಿರುವ ಕಾರ್ಯಕ್ರಮ ಗಳಿಂದ ರಾಜ್ಯ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಈ ಬಾರಿಯೂ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಎಐಸಿಸಿಯ ತುಮಕೂರು ಜಿಲ್ಲಾ ಉಸ್ತುವಾರಿ ಪಲ್ಲಂರಾಜು ತಿಳಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವ ದಿನದಿಂದಲೂ ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕನಿಷ್ಠ 8 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಈ ಹಿಂದಿನ 5 ವರ್ಷಗಳ ಯುಪಿಎ-2 ಆಡಳಿತ ಹಾಗೂ ಕಳೆದ ನಾಲ್ಕು ವರ್ಷಗಳ ಎನ್.ಡಿ.ಎ ಆಡಳಿತವನ್ನು ಗಮನಿಸಿದರೆ, ಪ್ರಮುಖವಾಗಿ ಕೃಷಿ, ಗ್ರಾಮೀಣಾಭಿವೃದ್ದಿ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಸಂಪೂರ್ಣ ವಾಗಿ ವಿಫಲವಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತನಾಡುತ್ತಿರುವ ಪ್ರಧಾನಿಗಳು ಇದುವರೆಗೂ ಯಾವುದೇ ಸ್ಪಷ್ಟ ಕಾರ್ಯಕ್ರಮ ನೀಡಿಲ್ಲ. ರೈತರ ಆತ್ಮಹತ್ಯೆ ತಡೆಯುವಂತಹ ಯಾವುದೇ ಕಾರ್ಯಕ್ರಮ ನೀಡಿಲ್ಲ. ಗ್ರಾಮೀಣಾಭಿವೃದ್ದಿಗೆ ಪೂರಕವಾದ ಒಂದೇ ಒಂದು ಯೋಜನೆ ನೀಡಿಲ್ಲ. ಆದರೆ ಯುಪಿಎ ಸರಕಾರದಲ್ಲಿ ಆಹಾರ ಹಕ್ಕು ಕಾಯ್ದೆ, ಉದ್ಯೋಗ ಖಾತ್ರಿ, ಆರ್.ಟಿ.ಐ, ಆರ್.ಟಿ.ಇ ನಂತಹ ಕಾಯ್ದೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿ, ಜನರು ಗ್ರಾಮೀಣ ಭಾಗದಿಂದ ನಗರಗಳಿಗೆ ಕೆಲಸಕ್ಕಾಗಿ ವಲಸೆ ಬರುವಂತೆ ಮಾಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿಯೂ ಸಂಪೂರ್ಣ ವಿಫಲವಾಗಿದ್ದು, ವಿದ್ಯಾವಂತ ಯುವಜನರನ್ನು ಪಕೋಡ ಮಾರಿ, ಪಾನ್ ಅಂಗಡಿ ತೆರೆಯಿರಿ ಎಂಬ ಬಿಟ್ಟಿ ಐಡಿಯಾ ನೀಡುತ್ತಾ, ಯುವಜನರು ಕೆಲಸವಿಲ್ಲದೆ ಅಲೆಯುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಕೃಷಿ ಸಾಲ ಮನ್ನಾ ಮಾಡಿದೆ. ಗ್ರಾಮೀಣ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದು, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೆಚ್ಚಿನ  ಅದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿಯೂ ನೀಡಲಿದೆ ಎಂಬ ಭರವಸೆಯನ್ನು ಪಲ್ಲಂರಾಜು  ನೀಡಿದರು.

ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಸಾಹಿತಿ ಕೆ.ಬಿ.ಸಿದ್ದಯ್ಯ ಕಾಂಗ್ರೆಸ್ ಗೆಲ್ಲಿಸಿ, ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿ ಎಂಬ ದ್ವಂದ್ವ ಹೇಳಿಕೆ ನೀಡುವ ಮೂಲಕ ಮಾದಿಗ ಸಮುದಾಯದ ಜನರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ. ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಾ.ಜಿ ಪರಮೇಶ್ವರ್ ಯಾವತ್ತು ಒಳಮೀಸಲಾತಿ ವಿರೋಧಿಯಾಗಿ ವರ್ತಿಸಿಲ್ಲ. ಚುನಾವಣೆ ನಂತರ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವ ಭರವಸೆಯನ್ನು ಈಗಾಗಲೇ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಶಾಸಕರ ಸಭೆಯಲ್ಲಿ ನೀಡಿದ್ದಾರೆ. ಈ ಬಗ್ಗೆ ತಪ್ಪು ತಿಳುವಳಿಯಿಂದ ಕೆ.ಬಿ.ಸಿದ್ದಯ್ಯ ಅವರು ಹೇಳಿಕೆ ನೀಡುತ್ತಿದ್ದು, ಅವರು ಹೇಳಿಕೆಯನ್ನು ತಿದ್ದಿಕೊಳ್ಳಬೇಕು. ಇವರ ಈ ಹೇಳಿಕೆಯನ್ನು ಜನರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಎಂದು ಭಾವಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುವಂತೆ ಮುಖ್ಯಮಂತ್ರಿಗಳ ಬಳಿ ಮಾತನಾಡುವುದಾಗಿ ತಿಳಿಸಿದರು.

ಟಿಕೆಟ್ ನೀಡುವ ಸಂಬಂಧ ಸಿದ್ದಯ್ಯ ಅವರ ಹೇಳಿಕೆ ಸರಿಯಿಲ್ಲ. ಈ ಹಿಂದೆ ಚುನಾವಣೆಗಳಲ್ಲಿ ಅಂದರೆ 2013 ರಲ್ಲಿ ಮಾದಿಗರಿಗೆ 11 ಜನರಿಗೆ ಟಿಕೆಟ್ ನೀಡಿದ್ದು, 2 ಜನ ಮಾತ್ರ ಗೆಲ್ಲಲು ಸಾಧ್ಯವಾಯಿತು. 2008ರಲ್ಲಿ 13 ಜನರಿಗೆ ನೀಡಿದ್ದು 3 ಜನರು ಮಾತ್ರ ಆಯ್ಕೆಯಾದರು. ಹಾಗಾಗಿ ಈ ಬಾರಿ ನಾಲ್ಕು ಬಾರಿ ಸಮೀಕ್ಷೆ ನಡೆಸಿ, ಗೆಲ್ಲಬಹುದಾದ 9 ಜನರಿಗೆ ಟಿಕೆಟ್ ನೀಡಲಾಗಿದೆ. ಮಾದಿಗ ಸಮುದಾಯವರಿಗೆ ಗೆಲ್ಲುವ ಶಕ್ತಿ ಹೆಚ್ಚಾದರೆ, ಟಿಕೆಟ್ ನೀಡುವ ಸಂಖ್ಯೆಯೂ ಹೆಚ್ಚಲಿದೆ. ಇದರಲ್ಲಿ ಡಾ.ಜಿ.ಪರಮೇಶ್ವರ್ ಪಾತ್ರವಿಲ್ಲ. ಅವರ ಮೇಲೆ ಬಂದಿರುವ ಅಪಾಧನೆಯನ್ನು ಹೋಗಲಾಡಿಸುವ ಸಲುವಾಗಿಯೇ ಈ ಬಾರಿ ಮಾದಿಗ ಸಮುದಾಯಕ್ಕೆ ಸೇರಿದ ಎಲ್ಲಾ ವರ್ಗದವರು ಕೊರಟಗೆರೆ ಕ್ಷೇತ್ರಕ್ಕೆ ಭೇಟಿ ನೀಡಿ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಾಗಿ ಡಾ.ಎಲ್.ಹನುಮಂತಯ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ, ಜಿಲ್ಲಾ ಉಸ್ತುವಾರಿ ವೇಣುಗೋಪಾಲ್, ಚಂದ್ರಶೇಖರಗೌಡ, ಪ್ರಚಾರ ಸಮಿತಿಯ ಕಾಡುಶೆಟ್ಟಿಹಳ್ಳಿ ಸತೀಶ್, ನರಸೀಯಪ್ಪ, ಹೇಮಂತ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News