ಚಿಕ್ಕಮಗಳೂರು: ಜಿಗ್ನೇಶ್, ಪ್ರಕಾಶ್ ರೈ ಕಾರ್ಯಕ್ರಮ ರದ್ದು ಪಡಿಸಲು ಬಿಜೆಪಿ ಒತ್ತಾಯ

Update: 2018-05-02 17:05 GMT

ಚಿಕ್ಕಮಗಳೂರು, ಮೇ 2: ಸಂವಿಧಾನ ಉಳಿವಿಗಾಗಿ ಜನಜಾಗೃತಿಗಾಗಿ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಕಾಶ್ ರೈ ಹಾಗೂ ಜಿಗ್ನೇಶ್ ಮೆವಾನಿ ಅವರ ಭಾಷಣಗಳು ಸಮಾಜದಲ್ಲಿ ಸೌಹಾರ್ದ ಕೆಡಿಸುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಜಿಲ್ಲಾ ಬಿಜೆಪಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಪಕ್ಷದ ಮಾಧ್ಯಮ ವಕ್ತಾರ ಸಿ.ಎಚ್.ಲೋಕೇಶ್, ನಗರದ ಕುವೆಂಪು ಕಲಾಮಂದಿರದಲ್ಲಿ ಮೇ 3ರಂದು ಸಂವಿಧಾನ ಉಳಿವಿಗಾಗಿ ಜನಜಾಗೃತಿಗಾಗಿ ಸಮಾವೇಶ ಹಮ್ಮಿಕೊಂಡಿರುವುದಾಗಿ ಗೌಸ್ ಮೊಹಿದ್ದೀನ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಸಮಾವೇಶದಲ್ಲಿ ಜ್ಞಾನಪ್ರಕಾಶ್ ಸ್ವಾಮೀಜಿ, ಗುಜರಾತ್ ಶಾಸಕ ಜಿಗ್ನೇಶ್‍ ಮೆವಾನಿ, ತೀಸ್ತಾ ಸೆಟಲ್ವಾಡ್, ಕಲ್ಕುಳಿವಿಠಲ್‍ಹೆಗ್ಡೆ, ನಟ ಪ್ರಕಾಶ್ ರೈ, ಎನ್.ವೆಂಕಟೇಶ್, ಅಮ್ಮರಾಮಚಂದ್ರ ಮತ್ತಿತರರು ಭಾಗವಹಿಸುತ್ತಾರೆ. ಚುನಾವಣಾ ಸಂಬಂಧ ಜನಜಾಗೃತಿ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದ್ದರೂ ಸಹ ಈಗಾಗಲೇ ನಡೆದಂತಹ ಬೇರೆ ಬೇರೆ ಸಮಾವೇಶಗಳಲ್ಲಿ ಜಿಗ್ನೇಶ್‍ ಮೆವಾನಿ ಮತ್ತು ನಟ ಪ್ರಕಾಶ್ ರೈ ಇವರ ಹೇಳಿಕೆಗಳಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ಬಂದಿದೆ ಎಂದರು. 

ಪ್ರಕಾಶ್ ರೈ ಹಾಗೂ ಜಿಗ್ನೇಶ್ ರೈಗೆ ಪ್ರಚಾರದ ಹುಚ್ಚು ಹಿಡಿದಿದ್ದು, ಈ ಕಾರಣಕ್ಕೆ ಅವರು ಹೋದಲೆಲ್ಲಾ ಕೋಮು ಸೌಹಾರ್ದಕ್ಕೆ ಒಳಿತು ಮಾಡುವುದರ ಬದಲಾಗಿ ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆ. ಫೇಸ್‍ಬುಕ್ ಹಾಗೂ ವಾಟ್ಸಾಪ್ ನಲ್ಲಿ ಇವರ ಹೇಳಿಕೆಯನ್ನು ಪ್ರಚಾರಪಡಿಸುತ್ತಾ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡುವುದು ನೋಡಿದಲ್ಲಿ ಮುಂದೆ ತೊಂದರೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಮತದಾನಕ್ಕೆ ಇನ್ನು ಕೇವಲ 10 ದಿನಗಳು ಮಾತ್ರ ಉಳಿದಿದ್ದು, ಈ ಸಂಧರ್ಭದಲ್ಲಿ ಈ ಸ್ವಯಂ ಘೋಷಿತ ಬುದ್ಧಿಜೀವಿಗಳಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉದ್ಭವಿಸುವ ಸಾದ್ಯತೆ ಇದೆ. ಇದು ಪ್ರಜಾ ಪ್ರತಿನಿಧಿ ಕಾಯ್ದೆ ಕಲಂ.125ಕ್ಕೆ ವಿರುದ್ಧವಾಗಿರುತ್ತದೆ. ಸದರಿಯವರು ಈ ಹಿಂದಿನ ಕಾರ್ಯಕ್ರಮದಲ್ಲಿ ಮಾಡಿದ ಬಾಷಣಗಳಿಂದ ಜನರು ಹೊಡೆದಾಡಬೇಕು ಎನ್ನುವುದು ಇವರ ವ್ಯವಸ್ಥಿತ ಪಿತೂರಿಯಾಗಿದೆ. ಇದನ್ನು ತಡೆ ಹಿಡಿಯುವುದು ಜಿಲ್ಲಾಡಳಿತದ ಕರ್ತವ್ಯವಾಗಿದ್ದು, ಈ ತಕ್ಷಣದಲ್ಲಿ ಕಾರ್ಯಕ್ರಮಕ್ಕೆ ನೀಡಲಾದ  ಅನುಮತಿಯನ್ನು ರದ್ದುಪಡಿಸಬೇಕೆಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸಮಾವೇಶವನ್ನು ರದ್ದುಪಡಿಸದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದಿರುವ ಅವರು, ಚುನಾವಣಾ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಈ ಮನವಿಯನ್ನು ಚಿಕ್ಕಮಗಳೂರು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅಬ್ಸರ್‍ವರ್ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಇವರಿಗೆ ಮನವಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News