ಬಿಜೆಪಿ-ಕಾಂಗ್ರೆಸ್ ದುರಾಡಳಿತವೇ ಜೆಡಿಎಸ್‍ಗೆ ಶ್ರೀರಕ್ಷೆ: ಜೆಡಿಎಸ್ ರಾಜ್ಯ ವಕ್ತಾರ ಭೋಜೇಗೌಡ

Update: 2018-05-02 17:10 GMT

ಚಿಕ್ಕಮಗಳೂರು, ಮೇ 2: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಖಚಿತ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಎರಡು ರಾಷ್ಟೀಯ ಪಕ್ಷಗಳ ದುರಾಡಳಿತವನ್ನು ನೋಡಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಜನತೆ ಬಯಸಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರಕಾರದ ಭ್ರಷ್ಟಚಾರವನ್ನು ಬಯಲಿಗೆಳೆದ್ದಿದ್ದೇ ಎಚ್.ಡಿ.ಕುಮಾರಸ್ವಾಮಿಯವರು. ಅದರ ಲಾಭವನ್ನು ಕಾಂಗ್ರೆಸ್ ಪಡೆದು ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರ 8,161 ಕೋಟಿ ರೈತರ ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ ಬಿಡಿಗಾಸು ಕೂಡ ಇದುವರೆಗೂ ರೈತರ ಬ್ಯಾಂಕ್ ಅಕೌಂಟ್‍ಗೆ ಬಂದಿಲ್ಲ, ರೈತರ ಸಾಲಮನ್ನಾ ಎಂಬುದು ಪೊಳ್ಳು ಭರವಸೆ ಎಂದರು.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ, ಕೇಂದ್ರದಲ್ಲಿರುವ ನರೇಂದ್ರ ಮೋದಿಯವರ ಸರ್ಕಾರಕ್ಕೆ ರೈತರ ಸಾಲಮನ್ನಾ ಮಾಡಬೇಕು ಎನಿಸಲಿಲ್ಲವೇ ಎಂದು ಪ್ರಶ್ನಿಸಿದ ಎಸ್.ಎಲ್. ಬೋಜೇಗೌಡ, ಬಿಜೆಪಿ ಚುನಾವಣೆ ಗೆಲುವು ಸಾಧಿಸಲು ಗಿಮಿಕ್ ಮಾಡುತ್ತಿದೆ. ರೈತರ ಸಾಲಮನ್ನಾ ಮಾಡುವ ಇಚ್ಛಾಶಕ್ತಿ ಅವರಿಗೆ ಇಲ್ಲ ಎಂದರು.

ಹೆಚ್.ಡಿ. ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ ಈ ಹಿಂದೆಯೂ ಹೇಳಿದ್ದರು. ಪಕ್ಷದ ಪ್ರಣಾಳಿಕೆಯಲ್ಲಿಯೂ ತಿಳಿಸಲಾಗಿದೆ. ಇದು ಚುನಾವಣೆ ಗಿಮಿಕ್ ಅಲ್ಲ, ಇದನ್ನು ಇಚ್ಛಾಶಕ್ತಿಯಿಂದ ಮಾಡಿತೋರಿಸುತ್ತೇವೆ ಎಂದರು. ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಈಗಾಗಲೇ ವಾಮಮಾರ್ಗ ಅನುಸರಿಸುತ್ತಿದೆ. ಸಖರಾಯಪಟ್ಟಣದಲ್ಲಿ ಸಿಕ್ಕಿರುವ ಅಕ್ರಮ ಮದ್ಯ, ಸೋಮವಾರ ಬೆಳಕಿಗೆ ಬಂದ ಲೋಡ್‍ಗಟ್ಟಲೇ ಸೀರೆಗಳು ಇದರ ಬಗ್ಗೆ ಪೊಲೀಸ್ ಇಲಾಖೆ ಸಮರ್ಪಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸೋಮವಾರ ಖಾಸಗಿ ಸರಕು ಸಾಗಣೆ ಕಂಪನಿ ಗೋದಾಮಿಗೆ ಬಂದಿರುವ ಲೋಡ್‍ಗಟ್ಟಲೇ ಸೀರೆಗಳ ಬಗ್ಗೆ ಚುನಾವಣಾಧಿಕಾರಿಗಳು ಈಗಾಗಲೇ ತನಿಖೆ ನಡೆಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗಿತ್ತು. ಈಗಾಗಲೇ ವಿಳಂಬ ಮಾಡಿದೆ ಎಂದು ಆರೋಪಿಸಿದ ಅವರು, ಸೀರೆಗಳು ಬಟ್ಟೆ ಅಂಗಡಿ ಮಾಲೀಕರು ತರಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಒಂದೇ ಮಾದರಿಯ, ಒಂದೇ ಬೆಲೆಯ ಸೀರೆಗಳು ಗುಜರಾತ್ ರಾಜ್ಯದಿಂದ ಬಂದಿದೆ. ಈ ಹಿಂದೆ ಇಷ್ಟು ಪ್ರಮಾಣದ ಸೀರೆಗಳನ್ನು ಅಂಗಡಿ ಮಾಲೀಕರು ತರಿಸಿದ್ದಾರೆಯೇ, ಗುಜರಾತ್‍ನಿಂದ ತರಿಸಿದ್ದಾರೆಯೇ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳಿಸಬೇಕೆಂದು ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹೊಲದಗದ್ದೆ ಗೀರೀಶ್, ದೇವಿಪ್ರಸಾದ್, ಬೈರೆಗೌಡ, ಸೋಮೇಗೌಡ ಇದ್ದರು.

ಚುನಾವಣಾ ಇಲಾಖೆ ಬಹಿರಂಗ ಪಡಿಸಬಾರದು: 
ಚುನಾವಣೆಯಲ್ಲಿ ಅಕ್ರಮ ಮತದಾನ ಮಾಡುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಯಾವ ಬೆರಳಿಗೆ ಮತ ಚಲಾಯಿಸಿದ ಗುರುತು ಹಾಕುವ ಬಗ್ಗೆ ಚುನಾವಣಾಧಿಕಾರಿಗಳು ಬಹಿರಂಗ ಪಡಿಸಬಾರದು ಹಾಗೂ ಮತದಾರರಿಗೆ ಬೆದರಿಕೆ ಒಡ್ಡುವ, ಆಮಿಷ ಒಡುವುದಕ್ಕೆ ಚುನಾವಣಾಧಿಕಾರಿಗಳು ಕಡಿವಾಣ ಹಾಕುವಂತೆ ಎಸ್.ಎಲ್. ಬೋಜೇಗೌಡ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಎಲ್ಲಾ ವರ್ಗಕ್ಕೆ ಆದ್ಯತೆ ನೀಡಿ ಟಿಕೆಟ್ ನೀಡಲಾಗಿದೆ. ವಿರೋಧ ಪಕ್ಷದವರು ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಬಿ.ಎಚ್.ಹರೀಶ್ ಪರ ಬೋಜೇಗೌಡ ಅವರು ಪ್ರಚಾರ ನಡೆಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆಲ್ಲ ಮೇ 15ರಂದು ಉತ್ತರ ಸಿಗಲಿದೆ ಎಂದು ಭೋಜೇಗೌಡ ಹೇಳಿದರು..
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News