ಸಿದ್ದರಾಮಯ್ಯ ಎದುರು ಬಿಜೆಪಿಯವರ ತಂತ್ರ ನಡೆಯದು: ಮೋಟಮ್ಮ

Update: 2018-05-02 17:16 GMT

ಮೂಡಿಗೆರೆ, ಮೇ 2: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತಂತ್ರ ಸಿದ್ದರಾಮಯ್ಯ ಎದುರು ನಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಹೇಳಿದರು.

ಅವರು ಬುಧವಾರ ತಾಲೂಕಿನ ಬಾನಳ್ಳಿಯಲ್ಲಿ ಗ್ರಾಮದಲ್ಲಿ ಮತಯಾಚಿಸಿ ಸುದ್ದಿಗಾರೊಂದಿಗೆ ಮಾತನಾಡಿ, ಆರೆಸ್ಸೆಸ್‍ನ ಆಂತರಿಕ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಬಿಜೆಪಿ 65 ರಿಂದ 70, ಕಾಂಗ್ರೆಸ್ 115ರಿಂದ 120 ಸ್ಥಾನ ಗೆಲ್ಲುತ್ತದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈಗಲಾದರೂ ಅಮಿತ್‍ ಶಾ ಅವರು ಸಿದ್ದರಾಮಯ್ಯರ ಬಲ ಎಂತಹದ್ದು ಎಂದು ತಿಳಿದುಕೊಳ್ಳಬೇಕು. ರಾಜ್ಯದ ಜನರು ಕಾಂಗ್ರೆಸನ್ನು ಬೆಂಬಲಿಸುತ್ತಿದ್ದಾರೆಂದರೆ ಅದು ಸಿದ್ದರಾಮಯ್ಯ ಅವರ ಜನಪರ ಕೆಲಸದಿಂದ ಮಾತ್ರ. ಕಾಂಗ್ರೆಸ್‍ನವರು ಅಂಬೇಡ್ಕರ್ ಅವರನ್ನು ಕಡೆಗಣಿಸುತ್ತಿದ್ದಾರೆಂದು ಅಮಿತ್ ಶಾ ಅವರು ಮೂಡಿಗೆರೆ ಬಂದಾಗ ಹೇಳಿದ್ದಾರೆ. 70 ವರ್ಷದಿಂದ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಆಡಳಿತ ನಡೆಸಿಕೊಂಡು ಬಂದಿರುವುದು ಕಾಂಗ್ರೆಸ್ ಪಕ್ಷವೋ ಅಥವಾ ಒಂದು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಸಂವಿಧಾನವನ್ನೇ ಬದಲಾಯಿಸಿಬಿಡುತ್ತೇವೆಂದು ಹೇಳಿದ್ದು ಬಿಜೆಪಿ ಪಕ್ಷವೋ ಎಂಬುದನ್ನು ಜನರು ತಿಳಿದಿದ್ದಾರೆ. ಸಿದ್ದರಾಮಯ್ಯ ಅವರ ಎದುರು ಬಿಜೆಪಿಯವರ ತಂತ್ರ ರಾಜ್ಯದಲ್ಲಿ ನಡೆಯುವುದಿಲ್ಲವೆಂದು ಹೇಳಿದರು.

ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್‍ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರದ ಉತ್ತಮ ಆಡಳಿತದಿಂದ ರಾಜ್ಯದ ಎಲ್ಲಾ ಜನರಿಗೆ ಅನುಕೂಲವಾಗಿದೆ. ಮೂಡಿಗೆರೆ ಕ್ಷೇತ್ರದಲ್ಲಿ ಕಳೆದ ಮೂರು ವರ್ಷದಿಂದ ಸಿಪಿಐ ಪಕ್ಷದಿಂದ ಅಭ್ಯಥಿಯನ್ನು ಕಣಕ್ಕಿಳಿಸಲಾಗುತ್ತಿತ್ತು. ಆದರೆ ಬಿಜೆಪಿಯಂತಹ ಭ್ರಷ್ಟ ಸರಕಾರ ಅಧಿಕಾರಕ್ಕೆ ಬರಬಾರದೆಂಬ ಹಿನ್ನಲೆಯಲ್ಲಿ ಈ ಬಾರಿ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿದ್ದೇವೆ. ಮತದಾರರು ಕೂಡ ಪ್ರಜ್ಞಾವಂತರಾಗಿದ್ದು, ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆಂದು ತಿಳಿಸಿದರು.

ಇದಕ್ಕೂ ಮುನ್ನ ಬಕ್ಕಿ, ಪಟದೂರು, ಬೆಟ್ಟಗೆರೆ, ಮೂಲರಹಳ್ಳಿ, ಸಬ್ಬೇನಹಳ್ಳಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಮತಯಾಚನೆ ಮಾಡಿದರು. 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್, ಪ.ಪಂ. ಸದಸ್ಯ ಟಿ.ಎ.ಮದೀಶ್, ಮುಖಂಡರಾದ ಮನೋಜ್, ಸುಂದರೇಶ್ ಕುಂದೂರು ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News