ಕೇಂದ್ರ ಸರಕಾರಕ್ಕೆ ಬೆಳೆಗಾರರ ಸಮಸ್ಯೆ ತಿಳಿದುಕೊಳ್ಳುವ ಸೌಜನ್ಯವಿಲ್ಲ: ಮೋಟಮ್ಮ ಗುಡುಗು

Update: 2018-05-03 18:44 GMT

ಮೂಡಿಗೆರೆ, ಮೇ.3: ಮೂಡಿಗೆರೆಗೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಬೆಳಗಾರೊಂದಿಗೆ ನಡೆಸಬೇಕಿದ್ದ ಸಂವಾದ ಕಾರ್ಯಕ್ರಮವನ್ನು ತಿರಸ್ಕರಿಸಿ ಹೋಗಿದ್ದಾರೆ. ಇನ್ನು ಬೆಳೆಗಾರರ ಕಷ್ಟ ಹೇಗೆ ಪರಿಹರಿಸುತ್ತಾರೆಂದು ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಗುಡುಗಿದರು.

ಅವರು ಗೋಣಿಬೀಡು ವ್ಯಾಪ್ತಿಯಲ್ಲಿ ವಿವಿಧ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿ, ಅಮಿತ್ ಶಾ ಅವರಿಗೆ ಬೆಳೆಗಾರ ಮೇಲೆ ಕಿಂಚಿತ್ತು ಕರುಣೆ ಇಲ್ಲ. ವೇದಿಕೆಯಲ್ಲಿ ಕಾರ್ಮಿಕರನ್ನು ಸನ್ಮಾನಿಸಿ ಕಾರ್ಮಿಕರ ಸಮಸ್ಯೆ ಬಗ್ಗೆ ಕೇಳಲೂ ಇಲ್ಲ. ಮಾತಾಡಲೂ ಇಲ್ಲ. ಇಲ್ಲಿ ಹೆಚ್ಚಾಗಿ ಕಾಫಿ ಮತ್ತು ಮೆಣಸು ಬೆಳೆಗೆ ಬೆಳೆಗಾರರು ಅವಲಂಭಿತರಾಗಿದ್ದಾರೆ. ಆದರೆ ಕಾಫಿ, ಮೆಣಸು ಬೆಳೆಗಾರರ ಬಗ್ಗೆ ಮಾತನಾಡದೆ, ಇಲ್ಲಿ ಬೆಳೆಯದ ಅಡಿಕೆ, ತೆಂಗು ಬೆಳೆ ಬಗ್ಗೆ ಮಾತನಾಡಿದ್ದಾರೆ. ಇಲ್ಲಿ ಯಾವ ಬೆಳೆ ಬೆಳೆಯುತ್ತಾರೆಂಬುದೇ ಅವರಿಗೆ ಗೊತ್ತಿಲ್ಲ. ಸಂವಾದ ಕಾರ್ಯಕ್ರಮದ ಮೂಲಕವಾದರೂ ಕೊಡಗು, ಹಾಸನ, ಚಿಕ್ಕಮಗಳೂರು ಭಾಗದಿಂದ ಆಗಮಿಸಿದ್ದ ಕಾಫಿ ಬೆಳೆಗಾರರ ಸಮಸ್ಯೆ ತಿಳಿದುಕೊಳ್ಳುವ ಸೌಜನ್ಯ ಕೂಡ ಅವರಿಗಿಲ್ಲ. ಇದರಿಂದ ತಿಳಿಯುತ್ತದೆ ಕೇಂದ್ರ ಸರಕಾರ ಬೆಳೆಗಾರರನ್ನು ಯಾವ ರೀತಿ ಕಾಣುತ್ತಿದ್ದಾರೆಂದು? ಜನರ ಸಮಸ್ಯೆ ಕೇಳದಿದ್ದ ಮೇಲೆ ಅವರಿಗೆ ಮತ ಯಾಕೆ ಹಾಕಬೇಕು ಎಂದು ಪ್ರಶ್ನಿಸಿದರು. 

ಸಿಪಿಐನ ಹಿರಿಯ ನಾಯಕಿ ರಾಧಾ ಸುಂದರೇಶ್ ಮಾತನಾಡಿ, ಸಿಪಿಐ ಕಾರ್ಮಿಕರ ಪಕ್ಷ. ಕಾಂಗ್ರೆಸ್ ಸರಕಾರ ಕಾರ್ಮಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರಿಂದ ನಮ್ಮ ಪಕ್ಷ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಮೋಟಮ್ಮ ಅವರು, ನಿರಂತರ 25 ವರ್ಷಗಳಿಂದ ಸರಳ ಸಾಮೂಹಿಕ ವಿವಾಹ ಆಯೋಜಿಸಿ ಬಡವರ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಿದ್ದಾರೆ. ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಸಹಕಾರ ಸಂಘ ಸ್ಥಾಪಿಸಿ ದಲಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದುಡಿಯುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಿಸಲು ಉದ್ಯೋಗ ಮೇಳ ಕಾರ್ಯಕ್ರಮದ ಮೂಲಕ 300 ನಿರುದ್ಯೋಗಿ ಯುವಕ-ಯುವತಿಯರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಳೆಗಾರರ, ದಲಿತರ, ಕಾರ್ಮಿಕರ ಪರವಾಗಿ ಕಾಳಜಿ ಹೊಂದಿರುವ ಮೋಟಮ್ಮ ಅವರನ್ನು ಗೆಲ್ಲಿಸಲೇಬೇಕೆಂದು  ಮನವಿ ಮಾಡಿದರು. 

ಸಿಪಿಐ ಮುಖಂಡರಾದ ಹರೀಶ್, ರವಿ ದೇವವೃಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಶೇಖರ್, ಮುಖಂಡರಾದ ಜಯಮಾಲಾ, ರಾಣಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News